ಸೈಬರ್ ಅಪರಾಧಗಳ ಬಗ್ಗೆ ಎಚ್ಚರವಾಗಿರಿ: ಪಿಎಸ್‌ಐ ಐಶ್ವರ್ಯ ನಾಗರಾಳ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅಹಿತಕರ ಘಟನೆಗಳು ನಡೆಯದಿರಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಅದ್ದರಿಂದ ಸಾರ್ವಜನಿಕರು ಕೆಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಗಣ್ಯರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತಿತರ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಭಾವನಾತ್ಮಕ ಅಥವಾ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಸಾರ್ವಜನಿಕರು ಇದರಿಂದ ಜಾಗರೂಕರಾಗಿರಬೇಕು. ಇದರಿಂದ ಪಾರಾಗಲು ನಿಮ್ಮ ಖಾತೆಯ ಪಾಸ್ವರ್ಡ್‌ಗಳನ್ನು ಆಗಾಗ ಬದಲಾಯಿಸುತ್ತಿರಿ. ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಎಪಿಕೆ ಫೈಲ್ ಅಥವಾ ಸಂಶಯಾಸ್ಪದ ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಎಚ್ಚರವಿರಲಿ. ಅಪರಿಚಿತ ವ್ಯಕ್ತಿ ಅಥವಾ ವಿದೇಶದಿಂದ ಬರುವ ಯಾವುದೇ ಕರೆಯನ್ನು ಸ್ವೀಕರಿಸದಿರಿ. ಸಿಬಿಐ, ನ್ಯಾಯಾಧೀಶ, ಪೊಲೀಸ್ ಇತ್ಯಾದಿ ಹೆಸರಿನಲ್ಲಿ ವೀಡಿಯೊ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿ ಹಣ ಲೂಟಿ ಮಾಡುತ್ತಾರೆ. ಇದನ್ನು ನಂಬದಿರಿ.

ಮನೆಯಲ್ಲಿ ನಗದು ಹಣ, ಆಭರಣಗಳನ್ನು ಇಡದೆ, ಬ್ಯಾಂಕ್ ಲಾಕರ್‌ನಲ್ಲಿಡಿ. ಮನೆಯ ಸುತ್ತಲೂ ರಾತ್ರಿ ದೀಪ ಹಾಕಿ. ಸಾಧ್ಯವಾದಷ್ಟು ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ. ಪರ ಊರಿಗೆ ಹೊರಟರೆ ಮನೆಯಲ್ಲಿನ ಲಾಕರ್‌ಗಳಿಗೆ ಬೀಗ ಹಾಕಿರಿ ಬೀಗದ ಕೈಗಳನ್ನು ಜೊತೆಗೆ ಕೊಂಡೊಯ್ಯಿರಿ. ಕಿಟಕಿಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಇಟ್ಟು ನಿದ್ರಿಸಬೇಡಿ. ಮುಂದಿನ ಮತ್ತು ಹಿಂದಿನ ಬಾಗಲಿಗೆ ಕಬ್ಬಿಣದ ಗ್ರಿಲುಗಳನ್ನು ಅಳವಡಿಸಿ. ಗೇಟ್ ಮತ್ತು ಮುಂಬಾಗಿಲಿಗೆ ಕಾಣುವಂತೆ ಬೀಗ ಹಾಕಬೇಡಿ. ಮನೆಯ ಮುಂದೆ ಯಾರಾದರೂ ಅಪರಿಚಿತರು ಓಡಾಡಿದರೆ, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗುವ ಮುಂಚೆ – 9480021100 ಸಂಖ್ಯೆಗೆ ಹೆಲ್ಪ್ ಎಂದು ಮೆಸೇಜ್ ಮಾಡಿ ನಿಮ್ಮ ಮಾಹಿತಿಯನ್ನು ನೀಡಿ.

ನಿಮ್ಮ ದ್ವಿಚಕ್ರ ವಾಹನಗಳಿಗೆ ಗುಣಮಟ್ಟದ ಹ್ಯಾಂಡ್‌ಲಾಕ್ ಅಳವಡಿಸಿ. ಅಪರಿಚಿತರಿಂದ ವಾಹನ ಖರೀದಿಸಬೇಡಿ. ಸಾರ್ವಜನಿಕ ಸ್ಥಳದಲ್ಲಿ ವಾಹನ ನಿಲ್ಲಿಸಬೇಕಾದರೆ ಸರಿಯಾದ ಬೆಳಕು, ಸಿಸಿ ಟಿವಿ ಇರುವ ಕಡೆಗಳಲ್ಲಿ ನಿಲ್ಲಿಸಿ. ರಾತ್ರಿ ವೇಳೆ ವಾಹನಗಳನ್ನು ಮನೆಯ ಕಂಪೌಂಡ್ ಹೊರಗೆ ಅಥವಾ ರಸ್ತೆಯ ಮೇಲೆ ನಿಲ್ಲಿಸಬೇಡಿ. ವಾಹನ ಖರೀದಿ ಅಥವಾ ಮಾರಿದ ತಕ್ಷಣ ದಾಖಲೆಗಳ ವರ್ಗಾವಣೆ ಮಾಡಿಕೊಳ್ಳಿ.

ಆಭರಣಗಳನ್ನು ಧರಿಸಿಕೊಂಡು ಹೊರಹೋಗುವುದನ್ನು ಕಡಿಮೆ ಮಾಡಿ. ನಿರ್ಜನ ಪ್ರದೇಶದಲ್ಲಿ ವಾಕಿಂಗ್ ಹೋಗಬೇಡಿ, ಅಪರಿಚಿತರಿಗೆ ವಿಳಾಸ ಹೇಳಲು ಹೋಗಬೇಡಿ. ಸಾಧ್ಯವಾದರೆ ಅಪರಿಚಿತರ ವಾಹನದ ನಂಬರ್‌ಗಳನ್ನು ಗುರುತಿಸಿಕೊಳ್ಳಿ. ಬೆಳ್ಳಿ, ಬಂಗಾರಗಳನ್ನು ತೊಳೆದುಕೊಡುವುದಾಗಿ ಹೇಳಿದರೆ ನಂಬಬೇಡಿ.

ಅಪರಿಚಿತರಿಗೆ ಮನೆಯನ್ನು ಬಾಡಿಗೆ ನೀಡಬೇಡಿ. ಬಾಡಿಗೆದಾರರ ವೋಟರ್ ಐಡಿ ಅಥವಾ ಆಧಾರ ಕಾರ್ಡ್ ಝೆರಾಕ್ಸ್ ನಿಮ್ಮ ಬಳಿಯಿರಲಿ. ಬಾಡಿಗೆದಾರರ ಪೂರ್ವಾಪರಗಳನ್ನು ತಿಳಿದುಕೊಳ್ಳಿ ಮತ್ತು ಸರಿಯಾದ ಒಪ್ಪಿಗೆ ಪತ್ರವನ್ನು ಮಾಡಿಟ್ಟುಕೊಳ್ಳಿ. ಈ ಮುಂತಾದ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರು ಸಹಕರಿಸಬೇಕೆಂದು ಪಿಎಸ್‌ಐ ನಾಗರಾಳ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಜಾಹೀರಾತುಗಳಿಗೆ ಮೋಸ ಹೋಗಬೇಡಿ. ಯಾವುದಾದರೂ ಆಮಿಷಗಳಿಗೆ ಬಲಿ ಬೀಳಬೇಡಿ. ವರ-ಕನ್ಯೆ ಹುಡುಕಿಕೊಡುವ ನಕಲಿ ಜಾಲತಾಣಗಳು ಸಾಕಷ್ಟಿವೆ. ಅವುಗಳಿಗೆ ಬಲಿಯಾಗಬೇಡಿ. ನಿಮಗೆ ಬಂದಿರುವ ಒಟಿಪಿ, ಸಿವಿವಿ, ಪಿನ್ ಇತರೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಎಟಿಎಂ ಕಾರ್ಡ್ ಬಳಸುವಾಗ, ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರವಾಗಿರಿ. ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣ 1930ಗೆ ಕರೆ ಮಾಡಿ ದೂರು ಸಲ್ಲಿಸಿ ಎಂದು ಪಿಎಸ್‌ಐ ಐಶ್ವರ್ಯ ನಾಗರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here