ವಿಜಯಸಾಕ್ಷಿ ಸುದ್ದಿ, ಗದಗ:ಯಕೃತ್ ರೋಗ ಉತ್ತರ ಕರ್ನಾಟಕದಾದ್ಯಂತ ನಿಶ್ಯಬ್ದವಾಗಿ ಹರಡುತ್ತಿದೆ. ವಯಸ್ಕರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದು, ಸಕಾಲದ ಪತ್ತೆ ಮತ್ತು ಚಿಕಿತ್ಸೆ ಅಗತ್ಯ, ಮುಂಜಾಗ್ರತೆ ವಹಿಸಬೇಕು ಎಂದು ಡಾ. ಜಯಂತ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಕೃತ್ ರೋಗಗಳು ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಮದ್ಯಪಾನ ಸಂಬಂಧಿತ ಯಕೃತ್ ರೋಗಗಳು ಮತ್ತು ಚಯಾಪಚಯ ಸಂಬಂಧಿತ ಕೊಬ್ಬಿನ ಯಕೃತ್ ರೋಗ ಈ ಸಮಸ್ಯೆಗಳ ಪ್ರಮುಖ ಕಾರಣಗಳಾಗಿವೆ. ಬಹುಕಾಲ ಮದ್ಯ ಸೇವಿಸುವ ಅನೇಕರಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣದೆಯೇ ಯಕೃತ್ ಹಾನಿಗೊಳಗಾಗುತ್ತದೆ. ಅಧ್ಯಯನಗಳ ಪ್ರಕಾರ, ಯಕೃತ್ ರೋಗಗಳು ಸಾಮಾನ್ಯವಾಗಿ 10-15 ವರ್ಷಗಳ ಕಾಲ ಅಗೋಚರವಾಗಿಯೇ ಬೆಳೆಯುತ್ತವೆ. ಕೊಬ್ಬಿನ ಯಕೃತ್ ಹೊಂದಿರುವ ಶೇ. 30ಕ್ಕಿಂತಲೂ ಹೆಚ್ಚಿನ ರೋಗಿಗಳು ಮೊದಲ ಮೌಲ್ಯಮಾಪನದ ಸಮಯದಲ್ಲೇ ಫೈಬ್ರೋಸಿಸ್ಗೆ ತುತ್ತಾಗಿರುತ್ತಾರೆ. ಇದರ ಪರಿಣಾಮವಾಗಿ, ಅನೇಕರು ವೈದ್ಯಕೀಯ ಸಲಹೆಯನ್ನು ವಿಳಂಬಿಸಿ, ರೋಗವು ಸಿರೋಸಿಸ್ ಹಂತಕ್ಕೆ ಮುಂದುವರಿದ ನಂತರವೇ ಚಿಕಿತ್ಸೆಗೆ ಮುಂದಾಗುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊಬ್ಬಿನ ಯಕೃತ್ ರೋಗವು ಹೆಚ್ಚುತ್ತಿದೆ. ಆತಂಕಕಾರಿ ಸಂಗತಿಯೆಂದರೆ, ಯಕೃತ್ ಸಮಸ್ಯೆಗಾಗಿ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಶೇ. 55-60ರಷ್ಟು ಜನರಿಗೆ ಈ ರೋಗ ಕಂಡುಬಂದಿದ್ದು, ಮದ್ಯ ಸೇವಿಸದವರೂ ಇದರಲ್ಲಿ ಸೇರಿದ್ದಾರೆ. ಯಕೃತ್ ರೋಗಗಳು ಸಾಮಾನ್ಯವಾಗಿ ಯಾವುದೇ ಎಚ್ಚರಿಕೆಯ ಲಕ್ಷಣಗಳಿಲ್ಲದೆ ಬೆಳೆಯುತ್ತವೆ. ಬೊಜ್ಜು, ಮಧುಮೇಹ, ರಕ್ತದೊತ್ತಡ ಹೆಚ್ಚಳ, ಕೊಲೆಸ್ಟೆರಾಲ್ ಅಸಮತೋಲನದಿಂದ ಈ ರೋಗ ಹರಡುತ್ತಿದೆ. ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ತಜ್ಞರು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಬಲೇಶ್ವರ ಕಲ್ಕಣಿ ಸೇರಿದಂತೆ ಇತರರು ಇದ್ದರು.



