ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವೀರಶೈವರಾಗಿರುವುದಕ್ಕೆ ನಮ್ಮೆಲ್ಲರಲ್ಲಿಯೂ ಹೆಮ್ಮೆ ಇರಲಿ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಶಾಂತಿಯನ್ನು ಬಯಸುವ ಧರ್ಮವಾಗಿದ್ದು, ಈ ಧರ್ಮದ ಆಚರಣೆಯಿಂದ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ಅದನ್ನು ಜಗತ್ತಿನ ಜನರಿಗೆ ನೀಡುವುದಕ್ಕೆಂದೇ ಜಗದ್ಗುರು ರೇಣುಕಾಚಾರ್ಯರು ಈ ಭೂಮಿಯ ಮೇಲೆ ಉದಯಿಸಿದರು ಎಂದು ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಆದಿ ಜಗದ್ಗುರುಗಳ ಜಯಂತಿ ಯುಗಮಾನೋತ್ಸವ ಆಚರಣೆಯಿಂದ ವೀರಶೈವ ಧರ್ಮದ ಪ್ರವರ್ತನೆ ಮತ್ತು ಧರ್ಮ ಜಾಗೃತಿ ಹೆಚ್ಚುತ್ತದೆ. ವೀರಶೈವ ಧರ್ಮ ಮಾನವ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಮಾನವ ಧರ್ಮಕ್ಕೆ ಸದಾ ಜಯವಾಗಲಿ ಎಂದು ಹೇಳಿದೆ. ಪಂಚಾಚಾರ್ಯರು ಮಾನವ ಧರ್ಮದ ಶುದ್ಧೀಕರಣಕ್ಕೆ ಮತ್ತು ಸಂಸ್ಕಾರ, ಸಂಸ್ಕೃತಿ ಆಚರಣೆಗೆ ಆದ್ಯತೆ ನೀಡಿದ್ದಾರೆ. ಜಗದ್ಗುರುಗಳ ಜಯಂತಿ ಆಚರಣೆಯಿಂದ ಜೀವನ ಸಂಸ್ಕಾರಯುಕ್ತವಾಗುತ್ತದೆ. ಧರ್ಮದ ತತ್ವ ಧರ್ಮದ ಆಚರಣೆ, ಆಚರಣೆಯ ಕ್ರಮಗಳನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಲು ಸದಾವಕಾಶವಾಗಿದೆ ಎಂದು ಶ್ರೀಗಳು ತಿಳಿಸಿದರು.
ವೀರಶೈವರು ಹಿಂದಿನ ಕಾಲಕ್ಕಿಂತ ಇಂದು ಒಗ್ಗಟ್ಟಾಗುವ ಅಗತ್ಯವಿದೆ. ವೀರಶೈವ ಆಚರಣೆ, ಧರ್ಮದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಯುವ ಸಮೂಹ ವೀರಶೈವ ಧರ್ಮದ ಅಭಿಮಾನ, ಸ್ವಾಭಿಮಾನ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಗ್ರಾಮ, ಮಠಗಳಲ್ಲಿ ಪ್ರತಿ ವರ್ಷ ಜಗದ್ಗುರುಗಳ ಜಯಂತಿ ನಿಮಿತ್ತ ಜಗದ್ಗುರುಗಳ ಜೀವನ ಚರಿತ್ರೆ, ವೀರಶೈವ ಧರ್ಮ ಕುರಿತು ಸಪ್ತ ದಿನಗಳ ಉಪನ್ಯಾಸ ಕಾರ್ಯಕ್ರಮ ಸಂಘಟಿಸಬೇಕು. ಹೆಣ್ಣು-ಗಂಡು ಸಮಾನತೆ ಸಾರಿದ ವೀರಶೈವ ಧರ್ಮ ಸದಾ ಕಾಲ ಜೀವಂತ ಇರುವ ಧರ್ಮ, ನಿತ್ಯ ಜೀವನದ ಪಾಠ ಕಲಿಸುವ ಧರ್ಮವಾಗಿದೆ ಎಂದರು.
ಸದಸ್ಯ ಡಾ. ರಾಜೇಂದ್ರ ಗಚ್ಚಿನಮಠ, ಮುಖಂಡ ಶಿವನಗೌಡ ಪಾಟೀಲ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ರತ್ನಾ ಕುರ್ತಕೋಟಿ, ಸುಮಾ ಕಲ್ಲೂರ, ಅಕ್ಕಮ್ಮ ಬೆಟಗೇರಿ, ಬಸವರಾಜ ತಳ್ಳಿಗೇರಿ, ಗೀತಾ ಕಳಕಾಪೂರ, ಸುಮಾ ಸಂಕನಗೌಡ್ರ, ಜಯಾ ಲಕ್ಕನಗೌಡ, ವಿ.ಬಿ. ಬಿಂಗಿ, ಈಶ್ವರ ಆದಿ, ಪ್ರಶಾಂತ ಹಿರೇಮಠ ಸೇರಿದಂತೆ ಇತರರಿದ್ದರು.