ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೀಚಿ ಹಾಸ್ಯ ಸಾಹಿತಿ ಎನ್ನಿಸಿಕೊಂಡಿದ್ದರೂ ಅವರ ಸಾಹಿತ್ಯದಲ್ಲಿ ಒಂದು ಸಂದೇಶವಿದೆ. ಅವರ ಸಾಹಿತ್ಯದ ಓದುವಿಕೆ ನಮಗೆ ಬದುಕನ್ನು ಕಲಿಸುತ್ತದೆ ಎಂದು ಹಾಸ್ಯ ದಿಗ್ಗಜ ಗಂಗಾವತಿ ಪ್ರಾಣೇಶ್ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಬೀಚಿಯವರ 13ನೇ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ನಾನಿಂದು ಜಗದ್ವಿಖ್ಯಾತ ಕಲಾವಿದನಾಗಿದ್ದೇನೆ. ಅದಕ್ಕೆ ಮೂಲ ನರೇಗಲ್ಲ ಎಂಬುದನ್ನು ನಾನೆಂದಿಗೂ ಮರೆತಿಲ್ಲ. ಇಲ್ಲಿನ ಶ್ರೀ ದತ್ತಾತ್ರೇಯ ದೇವಸ್ಥಾನದ ಉತ್ಸವಕ್ಕೆ ಹಲವಾರು ವರ್ಷಗಳ ಕಾಲ ನಾನು ಬಂದಿದ್ದು, ಅನೇಕ ಭಕ್ತರು ತಮ್ಮ ಮನೆಯಲ್ಲಿ ನನ್ನನ್ನು ಮೂರು ನಾಲ್ಕು ದಿನಗಳು ಇರಿಸಿಕೊಂಡು ನನ್ನ ಈ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಋಣದ ಜೊತೆಗೆ ಶ್ರೀ ಗುರು ದತ್ತಾತ್ರೇಯನ ಆಶೀರ್ವಾದವನ್ನೆಂದಿಗೂ ಮರೆಯಲಾರೆ ಎಂದರು.
ನನ್ನ ಮಾತಿಗೆ ಗೌರವ ನೀಡಿ ಇಲ್ಲಿನ ಸಾಹಿತ್ಯಾಸಕ್ತರು 13 ವರ್ಷಗಳ ಕೆಳಗೆ ಇಡೀ ಕರ್ನಾಟಕದಲ್ಲಿಯೇ ಮೊದಲನೆಯದಾದ ಬೀಚಿ ಬಳಗವನ್ನು ಸ್ಥಾಪಿಸಿ, ಈವರೆಗೆ ಅದನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ನನ್ನ ಗುರುಗಳ ಹೆಸರಿನ ಬಳಗದಿಂದ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅತೀವ ಸಂತಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗೆಭಾಷಣಕಾರರಾದ ಅನಿಲ ವೈದ್ಯ, ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಷಿ ತಮ್ಮದೇ ಆದ ವಿಶಿಷ್ಠ ಮಾತುಗಳಿಂದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿ, ನಗೆಯ ರಸದೌತಣ ಉಣಬಡಿಸಿದರು.
ಕಾರ್ಯಕ್ರಮದಲ್ಲಿ ಧರ್ಮರತ್ನಾಕರ ಪ್ರಶಸ್ತಿ ಪುರಸ್ಕೃತ ಡಾ. ಜಿ.ಕೆ. ಕಾಳೆ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಿ.ಎ. ಅರವಟಗಿಮಠ, ಕಾರ್ಯಕಾರಿಣಿ ಸದಸ್ಯರಾದ ನಿಂಗರಾಜ ಬೇವಿನಕಟ್ಟಿ, ಆದರ್ಶ ಕುಲಕರ್ಣಿ ಮತ್ತು ಕಾನೂನು ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಗಳಿಸಿದ ವಿದ್ಯಾಶ್ರೀ ಬೇವಿನಕಟ್ಟಿಯವರನ್ನು ಸನ್ಮಾನಿಸಲಾಯಿತು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದವರು ಮತ್ತು ಶ್ರೀ ಧರ್ಮಸ್ಥಳ ಗುಂಪಿನವರು ಶ್ರೀಗಳು, ಕಲಾವಿದರು, ಗಣ್ಯರನ್ನು ಸನ್ಮಾನಿಸಿದರು. ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಬಳಗದ ಸಾಮಾಜಿಕ ಕಳಕಳಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಂತರಾಷ್ಟ್ರೀಯ ಮಟ್ಟದ ಕಲಾವಿದರು ನರೇಗಲ್ಲಿಗೆ ಬರುವುದು ಸಾಮಾನ್ಯ ಮಾತಲ್ಲ. ನಿವೃತ್ತರೇ ಹೆಚ್ಚಾಗಿರುವ ಸಂಘದ ಕ್ರಿಯಾಶೀಲ ಸದಸ್ಯರನ್ನು ಅಭಿನಂದಿಸುತ್ತೇನೆ ಎಂದರು.
ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕೆ.ಎಸ್. ಕಳಕಣ್ಣವರ ಸ್ವಾಗತಿಸಿದರು. ಬಿ.ಬಿ. ಕುರಿ ಮತ್ತು ಮಹಾದೇವಪ್ಪ ಬೇವಿನಕಟ್ಟಿ ನಿರೂಪಿಸಿದರು. ಎಂ.ಎಸ್. ದಢೇಸೂರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ಮಲಾ ಹಿರೇಮಠ ವಂದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಿಥುನ್ ಪಾಟೀಲ ಮಾತನಾಡಿ, ಈ ಪಟ್ಟಣದಲ್ಲಿ ಬೀಚಿ ಬಳಗ ಮಾಡುತ್ತಿರುವ ಸಾಹಿತ್ತಿಕ ಸೇವೆಯನ್ನು ಬಹಳಷ್ಟು ವರ್ಷಗಳಿಂದ ಗಮನಿಸುತ್ತ ಬಂದಿದ್ದೇನೆ. ದಶಮಾನೋತ್ಸವ ಕಾರ್ಯಕ್ರಮಕ್ಕೆ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರನ್ನೇ ನರೇಗಲ್ಲಿಗೆ ಕರೆಯಿಸಿದ ಕೀರ್ತಿ ಬಳಗಕ್ಕಿದೆ. ಬಳಗದ ಯಾವುದೇ ಕಾರ್ಯಕ್ಕೂ ನಮ್ಮ ಬೆಂಬಲ ಇದ್ದೇ ಇದೆ ಎಂದರು.



