ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೆಜ್ಜೇನು ದಾಳಿ ನಡೆಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಎಂದಿನಂತೆ ವಿದ್ಯಾರ್ಥಿಗಳು ಬೆಳಿಗ್ಗೆ ಶಾಲೆಗೆ ಬಂದು ಪ್ರಾರ್ಥನೆ ಮುಗಿಸಿ, ಬಿಸಿಹಾಲು ಪಡೆಯಲು ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಮೀಪದ ತೋಟದಿಂದ ಹಾರಿಬಂದ ಹೆಜ್ಜೇನು ಹಿಂಡು ಆಕಸ್ಮಿಕವಾಗಿ ಮಕ್ಕಳ ಮೇಲೆ ದಾಳಿ ನಡೆಸಿದೆ.
ಮಕ್ಕಳ ಜೊತೆಗೆ ಕೆಲ ಶಿಕ್ಷಕರಿಗೂ ಕಡಿತವಾಗಿದೆ. ಮಕ್ಕಳು ಚೀರಾಡುತ್ತಿದ್ದ ಶಬ್ದ ಕೇಳಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಹೆಜ್ಜೇನುಗಳನ್ನು ಓಡಿಸಿ, ಗಾಯಗೊಂಡ ವಿದ್ಯಾರ್ಥಿಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದ್ದು, ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ಶಾಲಾ ಆವರಣದ ಸುತ್ತಮುತ್ತ ಹೆಜ್ಜೇನು ಗೂಡು ತೆರವುಗೊಳಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ.
ಮುಖ್ಯಶಿಕ್ಷಕಿ ಅನ್ನಮ್ಮ ಅವರೂ ಹೆಜ್ಜೇನು ದಾಳಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಿಗೆ ಯಾವುದೇ ತೊಂದರೆಗಳಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.


