ಬೆಂಗಳೂರು: “ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ ವರ್ತನೆ ಮುಂದುವರಿದರೆ ರೈತರ ಹೋರಾಟದ ಕಿಚ್ಚು ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ದಿನಗಳಿಂದ ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟ ಹಾಗೂ ಇತರೆ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಚಳವಳಿ ಇತರೆ ಜಿಲ್ಲೆಗಳಿಗೂ ಹರಡುತ್ತಿದೆ. ಅನೇಕ ಮಠಗಳ ಧರ್ಮಗುರುಗಳು ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಇಲ್ಲದಿರುವುದು ದುರದೃಷ್ಟಕರ ಎಂದು ಪತ್ರಿಕಾ ಹೇಳಿಕೆಯಲ್ಲಿ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರ ಷುಗರ್ ಹಿಯರ್ ಆರಂಭಕ್ಕೆ ಮೊದಲು ಎಫ್‌ಆರ್‌ಪಿ ದರ ನಿಗದಿ ಮಾಡುತ್ತದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನುಣುಚಿಕೊಳ್ಳುವ ತಂತ್ರ ಅನುಸರಿಸಿದ್ದಾರೆ. ಆದರೆ, ಕಾರ್ಖಾನೆಗಳು ಉತ್ಪಾದಿಸುವ ಉಪ ಉತ್ಪನ್ನಗಳ ವಹಿವಾಟಿನಲ್ಲೂ ರೈತರಿಗೆ ಪಾಲು ಕೊಡಿಸಲು ಕಾನೂನಿನ ಪ್ರಕಾರವೇ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಆದರೆ ಸತ್ಯವನ್ನು ಮರೆಮಾಚಿ ಎಲ್ಲ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು ಎಂಬಂತೆ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ನಾಟಕ ಆಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹಿಂದೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರ್ಕಾರಗಳಿದ್ದಾಗ ಬಿಜೆಪಿ ಬೆಳೆಗಾರರಿಗೆ ನ್ಯಾಯಯುತ ದರ ಕೊಡಿಸುವ ಕೆಲಸ ಮಾಡಿದೆ. ಈಗಲೂ ಕಾಲ ಮಿಂಚಿಲ್ಲ, ತಮ್ಮದು ರೈತ ಪರ ಸರ್ಕಾರ ಎಂದು ಮೊಸಳೆ ಕಣ್ಣೀರು ಸುರಿಸುವ ಸಿದ್ದರಾಮಯ್ಯ ರೈತ ಪರವಾದ ಆದೇಶ ಹೊರಡಿಸಲಿ. ಕಾರ್ಖಾನೆಗಳ ಪಾಲಿನ ಹಣದ ಜತೆಗೆ ಸರ್ಕಾರವು ಕೊಂಚ ಹಣ ನೀಡಲಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.
ಕಬ್ಬು ಮತ್ತು ಉತ್ಪನ್ನಗಳ ವಹಿವಾಟಿನಲ್ಲಿ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ಬರುತ್ತಿದೆ. ಅದರಲ್ಲಿ ಒಂದಷ್ಟು ಹಣವನ್ನು ಬೆಳೆಗಾರರಿಗೆ ವರ್ಗಾಯಿಸುವ ಕೆಲಸ ಮಾಡಲಿ. ಆ ಮೂಲಕ ಪ್ರತಿ ಟನ್ ಕಬ್ಬಿಗೆ 3,500 ರೂ. ಕೊಡಿಸಲಿ. ತೂಕದಲ್ಲಿ ಮೋಸ ಆಗುವುದನ್ನು ತಪ್ಪಿಸಿ, ಕಬ್ಬು ನುರಿಸಿದ ತಕ್ಷಣ ಪೇಮೆಂಟ್ ಮಾಡಲು ಕಾರ್ಖಾನೆಗಳಿಗೆ ಸೂಚನೆ ಕೊಡಲಿ. ಅದನ್ನು ಬಿಟ್ಟು 11 ಕಡೆ ತೂಕದ ಯಂತ್ರ ಅಳವಡಿಕೆಗೆ ನಿರ್ಧರಿಸಲಾಗಿದೆ ಎಂಬ ಹೇಳಿಕೆ ನೀಡುವ ಬದಲು ಮೊದಲು ತೂಕದ ಯಂತ್ರ ಸ್ಥಾಪಿಸಿ ಎಂದು ಒತ್ತಾಯಿಸಿದರು.
Advertisement


