ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕಪ್ಪತಗುಡ್ಡ ಸೇರಿದಂತೆ ಎಲ್ಲ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟದಲ್ಲಿ ಭಾಗಿಯಾಗಲು ಜಿಲ್ಲೆಯ ರೈತ ಮುಖಂಡರು ಬೆಳಗಾವಿಗೆ ಪ್ರಯಾಣ ಬೆಳೆಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದ ಬಗರಹುಕುಂ ಸಾಗುವಳಿದಾರರು, ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಸರಕಾರ ಈ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡ್ರ, ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ಅವೈಜ್ಞಾನಿಕವಾಗಿ ಅಭಯಾರಣ್ಯ ಎಂದು ಘೋಷಣೆ ಮಾಡಿ, ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಈ ಕರಾಳ ಕಾನೂನನ್ನು ತೆಗೆದು ಅರಣ್ಯ ಸಾಗುವಳಿ ಮಾಡಿದವರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಯೋಗಯ್ಯ ಶಶಿಮಠ, ಬಸವರಾಜ ವಡ್ಡರ, ಶರಣಪ್ಪ ಕಟ್ಟಿಮನಿ, ಬಸವಣ್ಣೆಯ್ಯ ಹಿರೇಮಠ, ಬಸವರಾಜ ವಡ್ಡರ, ಮಂಜು ಬುರ್ಲಿ, ರಾಯಪ್ಪ ಹಾವಿನ, ಫಕೀರಪ್ಪ ಕುಲಮರ, ಬೀರಪ್ಪ ಲಮಾಣಿ, ಶರಣಪ್ಪ ಬ್ಯಾಳಿ, ಕೇಶವ ರಾಠೋಡ, ತಿಮ್ಮಣ್ಣ ವಡ್ಡರ, ಮುತ್ತಣ್ಣ ವಡ್ಡರ ಮುಂತಾದವರು ಉಪಸ್ಥಿತರಿದ್ದರು.