ಬಳ್ಳಾರಿ:- ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಘಟನೆ ನಡೆದ ಐದು ದಿನಗಳ ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಸೋಕೋ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ವೇಳೆ 9 ಎಂಎಂ ಬುಲೆಟ್ ಪತ್ತೆಯಾಗಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಆಗಮಿಸಿದ ವಿಶೇಷ ತನಿಖಾ ತಂಡಗಳು ಫೈರಿಂಗ್ ನಡೆದ ಸ್ಥಳ ಮತ್ತು ರೆಡ್ಡಿ ನಿವಾಸದ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬುಲೆಟ್ ಎಷ್ಟು ದೂರದಿಂದ ಹಾರಿಸಲಾಗಿದೆ ಎಂಬುದರ ಬಗ್ಗೆ ಅಳತೆ ನಡೆಸಿವೆ.
ಗಲಾಟೆ ಪೂರ್ವ ನಿಯೋಜಿತ ಕೃತಿಯೇ ಎಂಬುದನ್ನು ದೃಢಪಡಿಸುವಂತೆ ಎರಡೂ ಕಡೆಯವರಿಂದ ಕಲ್ಲು, ದೊಣ್ಣೆಗಳ ಬಳಕೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇತ್ತ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಕಾಂಗ್ರೆಸ್ ಈ ವಿಚಾರದಲ್ಲಿ ಮೌನ ವಹಿಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.



