ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಂದಲೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅದರಂತೆ ಇದೀಗ 17 ವರ್ಷದ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ ಹಾರಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪೂರ್ವ ಭಾಗದ ರಿಚರ್ಡ್ಸ್ ಟೌನ್‌ನಲ್ಲಿ ನಡೆದಿದೆ.
ಮೃತನ್ನು 12ನೇ ತರಗತಿಯ ವಿಜ್ಞಾನ ವಿದ್ಯಾರ್ಥಿ ಎಂದು ಹೇಳಲಾಗಿದೆ. ಬೆಳಿಗ್ಗೆ 8.20ರ ಸುಮಾರಿಗೆ ಶಾಲಾ ಕಟ್ಟಡದಿಂದ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ವಿದ್ಯಾರ್ಥಿಯ ಸಾವನ್ನು ಅಹಜ ಸಾವು ಎಂದು ವರದಿ (ಯುಡಿಆರ್) ಮಾಡಲಾಗಿದೆ. ಈಗಾಗಲೇ ಪೊಲೀಸರು ಶಾಲೆಯ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ವಿದ್ಯಾರ್ಥಿ ಸಾವಿಗೆ ಕಾರಣ ಏನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.
ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಯ ಮನೆಯವರಿಗೆ ಕಳಿಸಿದ ಪತ್ರದ ಪ್ರಕಾರ, ಶಾಲೆಯಲ್ಲಿ ಮಕ್ಕಳ ಬೆಳಗಿನ ಅಸೆಂಬ್ಲಿ ಸಮಯದಲ್ಲಿ ವಿದ್ಯಾರ್ಥಿ ಶಾಲೆಯ ಎರಡನೇ ಮಹಡಿಯಿಂದ ಹಾರಿದ್ದಾನೆ ಎಂದು ಹೇಳಲಾಗಿದೆ. ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.


