ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಜಿ.ಆರ್. ಫಿಲಂಸ್ ಬೆಂಗಳೂರು ಲಾಂಛನದಲ್ಲಿ ಭಕ್ತಿ ಪ್ರಧಾನ ‘ತಾರಕೇಶ್ವರ’ ಕನ್ನಡ ಚಲನಚಿತ್ರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿದ್ದು, ಸಧ್ಯದಲ್ಲೇ ಸೆನ್ಸಾರ್‌ಗೆ ಹೋಗಲು ಸಿದ್ಧವಾಗಿದೆ.
ಈಗಾಗಲೇ ಚಲನಚಿತ್ರರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಗಣೇಶ್‌ರಾವ್ ಕೇಸರಕರ ಅವರ 333ನೇ ಚಿತ್ರ ಇದಾಗಿದೆ. ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಅವರು ಹೇಳುವಂತೆ, ಈ ಹಿಂದೆ ‘ಸಿದ್ಧರಾಮೇಶ್ವರ’ ಚಿತ್ರದಲ್ಲಿ ಗಣೇಶ್‌ರಾವ್ ಶಿವನಾಗಿ ನಟಿಸುತ್ತಿರುವ ಸಂದರ್ಭದಲ್ಲೇ ‘ತಾರಕೇಶ್ವರ’ ಕುರಿತಂತೆ ಒನ್ ಲೈನ್ ಎಳೆ ಚರ್ಚಿಸಲಾಗಿತ್ತು.
ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆಯನ್ನು ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶಗಳೊಂದಿಗೆ ಚಿತ್ರದಲ್ಲಿ ತೋರಿಸಲಾಗಿದೆ.
ಗಣೇಶ್‌ರಾವ್ ಕೇಸರಕರ್ ಪುತ್ರ ಪ್ರಜ್ವಲ್ ಕೇಸರಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದೆ ಎಂದರು.
ನಾನು ‘ಸಿದ್ಧರಾಮೇಶ್ವರ’ ಚಿತ್ರದಲ್ಲಿ ಈಶ್ವರ ಪಾತ್ರ ಮಾಡಿದಾಗ ಎಲ್ಲರೂ ಇಷ್ಟಪಟ್ಟರು. ಮುಂದೆ ‘ಗಂಗೆಗೌರಿ’ ಆರಂಭಿಸಿ ಎಡಿಟಿಂಗ್ ಸಮಯದಲ್ಲಿ ‘ತಾರಕೇಶ್ವರ’ ಚಿತ್ರ ಮಾಡುವ ಬಗ್ಗೆ ಪ್ರಸ್ತಾಪ ಬಂತು. ಆಗ ಒಂದಷ್ಟು ಆಪ್ತರು ಹಣ ಹೂಡಲು ಮುಂದೆ ಬಂದರು. ಇವರೆಲ್ಲರ ಸಹಕಾರದಿಂದಲೇ ತಾರಕಾಸುರನಾಗಿ ಅಭಿನಯಿಸಲು ಸಾಧ್ಯವಾಯಿತು ಎಂದು ಚಿತ್ರದ ನಿರ್ಮಾಪಕರೂ ಆದ ಗಣೇಶ್‌ರಾವ್ ಕೇಸರಕರ್ ಸಂತಸ ಹಂಚಿಕೊಂಡರು.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ-ಮುತ್ತುರಾಜ್, ಸಂಗೀತ-ರಾಜ್‌ಭಾಸ್ಕರ್, ಸಂಕಲನ-ಅನಿಲ್ ಕುಮಾರ್, ನೃತ್ಯ-ಕಪಿಲ್, ವಸ್ತ್ರಾಲಂಕಾರ-ವೀರೇಂದ್ರ ಬೆಳ್ಳಿಚುಕ್ಕಿ, ವರ್ಣಾಲಂಕಾರ-ಅಭಿನಂದನ, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಂಭಾಷಣೆ ಜೆಮ್ ಶಿವು, ಸಂಕಲನ-ಆರ್.ಅನಿಲ್ ಕುಮಾರ್, ಸಹ ನಿರ್ದೇಶನ-ಜೆಮ್ ಶಿವು, ಶ್ರೀಕರ ಮಂಜು, ಸಹ ನಿರ್ಮಾಪಕರು -ತುಳಜಾಬಾಯಿ, ರೂಪ ಎಸ್.ದೊಡ್ಡನಿ, ಡಾ. ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ, ನಿರ್ಮಾಣ ನಿರ್ವಹಣೆ-ಹೇಮಂತ್ ಬಾಬು, ನಿರ್ಮಾಪಕರು ಗಣೇಶ್ ರಾವ್ ಕೇಸರಕರ ಆಗಿದ್ದಾರೆ.
ಶೀಘ್ರದಲ್ಲೇ ಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವದಾಗಿ ನಿರ್ಮಾಪಕ ಗಣೇಶರಾವ್ ಮತ್ತು ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರಸ್ವಾಮಿ ಹೇಳಿದ್ದಾರೆ.
ಪಾರ್ವತಿಯಾಗಿ ನಾಯಕಿ ರೂಪಾಲಿ ಹಾಡಿನಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ಬಾಲನಟಿ ಋತುಸ್ಪರ್ಶ, ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಶಂಕರಭಟ್, ಶ್ರೀವಿಷ್ಣು, ಜಿಮ್ ಶಿವು, ಎನ್.ಟಿ. ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜ ದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.