ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪುಲಿಗೆರೆ ಉತ್ಸವ 2ನೇ ದಿನವಾದ ಶನಿವಾರ ಸಂಜೆಯ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿ.ಕಾವ್ಯ ಕಾಶಿನಾಥನ್ ಮತ್ತು ಶಶಾಂಕ್ ಕಿರೋಣ ನಾಯರ್ ಅವರ ಭರತನಾಟ್ಯ ಎಲ್ಲರನ್ನು ಆಕರ್ಷಿಸಿತು.
ನಾಟ್ಯಾಚಾರ್ಯ ಮಿಥುನ್ ಶ್ಯಾಮ್‌ರ ಶಿಷ್ಯರಾದ ವಿದುಷಿ ಕಾವ್ಯ ಕಾಶಿನಾಥ್ ಹಾಗೂ ವಿದ್ವಾನ್ ಶಶಾಂಕ್ ನಾಯರ್ ಅವರ ಅದ್ಭುತ ಪ್ರದರ್ಶನ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು. ನೃತ್ಯ ಪ್ರದರ್ಶನದ ಪ್ರಾರಂಭಕ್ಕೆ ಶಿವನ ಕುರಿತಾದ ವರ್ಣನೆ, ದೇವಿ ಪರ್ವತನಂದಿನಿ ಹಾಗೂ ಶಿವನ ಆನಂದ ತಾಂಡವದ ಅದ್ಭುತ ವಿಜೃಂಭನೆಯಣೆಯನ್ನು ವರ್ಣಿಸುವ ನೃತ್ಯಗಳು ಅದ್ಭುತವಾಗಿದ್ದವು.
ರಾಗ ತೊಡಿ ಆಧಿತಾಳದಲ್ಲಿ ಪ್ರಸನ್ನ ಕುಮಾರ್ ರಚನೆಯಲ್ಲಿ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಅವರ ಸಂಗೀತ ಸಂಯೋಜನೆಯಲ್ಲಿ ನೃತ್ಯ ಪ್ರದರ್ಶನ ಮೂಡಿಬಂದಿತು. ಶ್ರೀ ಮಹಾವಿಷ್ಣು ಸ್ಥಿತಿಕಾರರು.
ಅಧರ್ಮವನ್ನು ಧ್ವಂಸ ಮಾಡಿ ಧರ್ಮದ ಮಾರ್ಗವನ್ನು ಸ್ಥಾಪಿಸುತ್ತಾರೆ. ಧರ್ಮ ಪಾಲನೆಗಾಗಿ ವಿಷ್ಣು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಹೀಗೆ ದಶರೂಪಗಳ ವರ್ಣನೆಯನ್ನು ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ರಚನೆ ದಶಾವತಾರ-ಶುದ್ಧ ಸಾವೇರಿ ರಾಗ, ರೂಪಕ ತಾಳದಲ್ಲಿ ಭರತನಾಟ್ಯ ಕಲಾವಿದರು ಪ್ರಸ್ತುತ ಪಡಿಸಿ ಮೆಚ್ಚುಗೆಯನ್ನು ಪಡೆದರು.