ವಿಜಯಸಾಕ್ಷಿ ಸುದ್ದಿ, ಗದಗ : ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿ ಮಾಡಿ ದೇಶಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾ ಗುರು ಭವನದ ಭೂಮಿ ಪೂಜೆ ಮತ್ತು ಸರಕಾರಿ ಪ್ರಾಥಮಿಕ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ಶಿಕ್ಷಣ ಅರಸಿ ಬರುತ್ತಾರೆ. ಅವರನ್ನು ಶಿಕ್ಷಕರು ತಮ್ಮ ಮಕ್ಕಳೆಂದೇ ತಿಳಿದು ಉತ್ತಮ ಶಿಕ್ಷಣ ನೀಡಬೇಕು. ಕೆಲವರು ಕೇವಲ ನಗರದ ಮಕ್ಕಳು ಬೌದ್ಧಿಕವಾಗಿ ಮುಂದೆ ಇರುತ್ತಾರೆ ಎನ್ನುತ್ತಾರೆ ಮತ್ತು ಹಿಂದಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಉನ್ನತ ಸಮುದಾಯದವರು ಮಾತ್ರ ಶಿಕ್ಷಣ ಪಡೆದು ಉತ್ತಮ ಅಂಕ ಗಳಿಸುತ್ತಾರೆ ಎಂಬುವುದಿತ್ತು. ಆದರೆ ಈಗ ಕಾಲ ಬದಲಾಗಿದೆ. ಶೋಷಿತ ವರ್ಗ ಎಂದು ಗುರುತಿಸಿಕೊಂಡವರು ಸಹ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಗ್ರಾಮೀಣ ಮಕ್ಕಳಲ್ಲಿಯೂ ಎಲ್ಲಾ ರೀತಿಯ ಬೌದ್ಧಿಕ ಪ್ರತಿಭೆ, ಚಾಣಾಕ್ಷತನಕ್ಕೆ ಕೊರತೆಯಿಲ್ಲ. ಸರ್ಕಾರಿ ಶಾಲೆಗಳು ಎಂದರೆ ಕೇವಲವಾಗಿ ಕಾಣದೇ ಅಸುಂಡಿ, ಹೊಸಳ್ಳಿ, ಹುಲಕೋಟಿ ಗ್ರಾಮದ ಸರ್ಕಾರಿ ಶಾಲೆಯ ಗುಣಮಟ್ಟದಂತೆ ಎಲ್ಲಾ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಗದಗ ಜಿಲ್ಲೆಯೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷದ 26ನೇ ಸ್ಥಾನದಿಂದ ಈ ವರ್ಷ 15ನೇ ಸ್ಥಾನಕ್ಕೆ ಬಂದಿದೆ. ಅದೇ ರೀತಿ ಪಿಯುಸಿಯ ಫಲಿತಾಂಶವನ್ನು ಸುಧಾರಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ನುಡಿದರು.
ಶಾಲೆಯಲ್ಲಿ ಶೋಷಣೆ ಮುಕ್ತ ವಾತವರಣ ನಿರ್ಮಾಣವಾಗಬೇಕು. ಇದರಿಂದ ಎಲ್ಲರಿಗೂ ಸ್ವಾಭಿಮಾನ ತರಬೇಕು. ಅಂದಾಗ ಮಾತ್ರ ಈ ಶೈಕ್ಷಣಿಕ ಸಮ್ಮೇಳನ ಸಾರ್ಥಕ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನ, ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮತ್ತು ಸರಕಾರಿ ಪ್ರಾಥಮಿಕ ಶಾಲೆಗಳ ಸಬಲೀಕರಣ ಕುರಿತು ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭ ನೆರವೇರಿತು.
ಕಾರ್ಯಕ್ರಮದಲ್ಲಿ ಅಕ್ಬರ್ ಸಾಬ ಬಬರ್ಚಿ, ಬಿ.ಬಿ. ಅಸೂಟಿ, ಎಸ್.ಎನ್. ಬಳ್ಳಾರಿ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಪ್ರಭು ಬುರಬುರೆ, ಎಂ.ಎ. ರಡ್ಡೆರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಬಸಲಿಂಗಪ್ಪ ಹಾಜರಿದ್ದರು. ಕಾರ್ಯಕ್ರಮವನ್ನು ಎ.ಎಂ. ಹೀರೆಮಠ ನಿರ್ವಹಿಸಿದರು.
ಹಲವರ ಸತತ ಪ್ರಯತ್ನದಿಂದ ಇಂದು ನಗರದ ಆದರ್ಶ ಕಾಲೋನಿಯಲ್ಲಿ ಗುರುಭವನಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಈ ಗುರುಭವನವು ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದ್ದಲ್ಲದೆ, ಎಲ್ಲಾ ಶಿಕ್ಷಕರಿಗೆ ಸೇರಿದ್ದು. ಇದನ್ನು ಕೇವಲ ಮದುವೆ ಸಮಾರಂಭಗಳಿಗೆ ಉಪಯೋಗಿಸಲು ಸೀಮಿತಗೊಳಿಸದೆ, ಗುರುಭವನದಲ್ಲಿ ಎಲ್ಲರಿಗೂ ಓದಲು ಡಿಜಿಟಲ್ ಗ್ರಂಥಾಲಯ ನಿರ್ಮಾಣವಾಗಿ, ಮಾದರಿ ಗುರುಭವನ ತಲೆ ಎತ್ತಿ ನಿಲ್ಲಬೇಕು ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.
ಅಂಬೇಡ್ಕರರು ಹೇಳಿದಂತೆ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕ. ಅವರನ್ನು ಕೇವಲ ಆರ್ಟಿಕಲ್ ಸಂವಿಧಾನಕ್ಕೆ ಸೀಮಿತಗೊಳಿಸದೇ ಅವರ ಮಾರ್ಗದರ್ಶನವನ್ನು ನಾವೆಲ್ಲರೂ ಪಾಲಿಸಿ, ಎಲ್ಲಾ ಶಿಕ್ಷಕರು ಆನಂದಿಂದ ತಮ್ಮನ್ನು ತಾವು ಮಕ್ಕಳ ಜ್ಞಾನದ ಒಕ್ಕಲುತನ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.