ಬೆಂಗಳೂರು: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಈರುಳ್ಳಿ ಬೆಲೆ ಏರಿಕೆ ಶಾಕ್ ನೀಡಿದೆ.
ನಿತ್ಯದ ಅಡುಗೆಯಲ್ಲಿ ಪ್ರಮುಖವಾಗಿ ಬಳಸುವ ಈರುಳ್ಳಿಯ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕೆಜಿಗೆ ₹100 ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಈ ಬಾರಿ ಈರುಳ್ಳಿ ಬೆಳೆಯ ಮೇಲೆ ಪರಿಣಾಮ ಬೀರಿದೆ. ಮಳೆ ಕೊರತೆಯಿಂದಾಗಿ ಈರುಳ್ಳಿ ಇಳುವರಿ ಸುಮಾರು 70ರಷ್ಟು ಕುಸಿತವಾಗಿದೆ ಎನ್ನಲಾಗಿದ್ದು, ಇದರಿಂದ ಮಾರುಕಟ್ಟೆಯಲ್ಲಿ ದಾಸ್ತಾನು ಪ್ರಮಾಣವೂ ಕಡಿಮೆಯಾಗಿದೆ.
ಸದ್ಯ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬರುವ ಈರುಳ್ಳಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮತ್ತೊಂದೆಡೆ, ಇಲ್ಲಿಂದ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಈರುಳ್ಳಿ ರಫ್ತು ಮುಂದುವರಿದಿದ್ದು, ಹೊರಗಿನಿಂದ ಈರುಳ್ಳಿ ಆಮದು ಬಹುತೇಕ ಸ್ಥಗಿತಗೊಂಡಿರುವುದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಪ್ರಸ್ತುತ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಗುಣಮಟ್ಟದ ಈರುಳ್ಳಿ ಕೆಜಿಗೆ ₹70ರಿಂದ ₹75ರವರೆಗೆ ಮಾರಾಟವಾಗುತ್ತಿದೆ. ಎಪಿಎಂಸಿ ಸಗಟು ಮಾರುಕಟ್ಟೆಯಲ್ಲೇ ಈರುಳ್ಳಿ ದರ ಕೆಜಿಗೆ ₹50ರಿಂದ ₹60ರಷ್ಟಿದೆ.
ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ಹಾಗೂ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕೆಜಿಗೆ ₹10ರಿಂದ ₹20ರವರೆಗೆ ಏರಿಕೆಯಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಈರುಳ್ಳಿ ಬೆಲೆ ಏರಿಕೆಯ ಬಿಸಿ ಮುಂದಿನ ಒಂದು-ಒಂದೂವರೆ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ದಾಸ್ತಾನು ಕೊರತೆ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದರೆ ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹100 ಮುಟ್ಟುವ ಸಾಧ್ಯತೆಯಿದೆ.
ಈರುಳ್ಳಿ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮೇಲೂ ಪರಿಣಾಮ ಬೀರುತ್ತಿದೆ. ಈರುಳ್ಳಿ ಇಲ್ಲದೆ ಬಹುತೇಕ ಅಡುಗೆ ಸಾಧ್ಯವಿಲ್ಲದ ಕಾರಣ, ಬೆಲೆ ಎಷ್ಟೇ ಏರಿಕೆಯಾದರೂ ಅನಿವಾರ್ಯವಾಗಿ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಈರುಳ್ಳಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆ ನೀಡುತ್ತಿದ್ದಂತೆ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಆ ಮೂಲಕ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.



