ಬೆಂಗಳೂರು: ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ ಇಂದು ಬೆಳಂಬೆಳಗ್ಗೆ ಹಲವು ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ಶಿವಮೊಗ್ಗ, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರಿಗೆ ಸಂಬಂಧಿಸಿದ್ದಾಗಿ ಹೇಳಲಾಗಿರುವ ನಗರದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿ ಕೃಷಿ ಇಲಾಖೆ ವಿಜಿಲೆನ್ಸ್ ವಿಭಾಗದ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್ ಅವರು ಈ ಹಿಂದೆ ಧಾರವಾಡದಲ್ಲಿಯೂ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಧಾರವಾಡದಲ್ಲಿ ಒಟ್ಟು ಮೂರು ಕಡೆ ದಾಳಿ ನಡೆಸಲಾಗಿದ್ದು, ರಾಣಿ ಚೆನ್ನಮ್ಮ ನಗರದಲ್ಲಿರುವ ಖಾಸಗಿ ಕಚೇರಿ ಹಾಗೂ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಸಮೀಪದ ಫಾರ್ಮ್ ಹೌಸ್ ಮೇಲೂ ಪರಿಶೀಲನೆ ನಡೆಯುತ್ತಿದೆ. ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದ್ದು, ಆರು ಮಂದಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ವಿರುದ್ಧವೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಡಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್‌ಪಿ ಮಂಜುನಾಥ ಚೌಧರಿ ಅವರ ನೇತೃತ್ವದಲ್ಲಿ ಶಿವಮೊಗ್ಗದ ಕಚೇರಿ, ಬೆಂಗಳೂರಿನ ಮನೆಗಳು ಸೇರಿದಂತೆ ಒಟ್ಟು ಐದು ಕಡೆ ದಾಳಿ ನಡೆದಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರೂಪ್ಲಾ ನಾಯ್ಕ್ ಹಾಗೂ ಸಹಾಯಕ ಎಂಜಿನಿಯರ್ ಶ್ಯಾಮ್ ಅವರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ರೂಪ್ಲಾ ನಾಯ್ಕ್ ಅವರ ಶಿವಮೊಗ್ಗದ ಬಸವನಗುಡಿಯಲ್ಲಿರುವ ಮನೆ, ಡಿಸಿ ಕಾಂಪೌಂಡ್‌ನಲ್ಲಿರುವ ಇಲಾಖೆಯ ಕಚೇರಿ, ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಹೋಬಳಿಯ ಹಳ್ಳಿಹಟ್ಟಿ ತಾಂಡದ ಮನೆ,
ಬೆಂಗಳೂರಿನ ಕುಂಬಳಗೂಡಿನ ಪನೂರಮ ಅಪಾರ್ಟ್‌ಮೆಂಟ್ ಹಾಗೂ ಸ್ಯಾಟಲೈಟ್ ಏರಿಯಾದಲ್ಲಿರುವ ಮನೆ ಸೇರಿ ಬೆಂಗಳೂರಿನಲ್ಲಿ ಎರಡು ಕಡೆ ಪರಿಶೀಲನೆ ನಡೆಯುತ್ತಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.



