ಬೆಳಗಾವಿ: ಬೆಳಗಾವಿ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರು, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಬಿಗ್ ಶಾಕ್ ನೀಡಿದ್ದಾರೆ. ಎರಡು ದಶಕಗಳ ಬಳಿಕ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನ ಸವದಿ ಕೈತಪ್ಪಿದ್ದು, ಸಚಿವ ಸತೀಶ್ ಪುತ್ರ ರಾಹುಲ್ ಜಾರಕಿಹೊಳಿ ಪಾಲಾಗಿದೆ.
ಹೌದುಅಪೆಕ್ಸ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಸೆಗೆ ಜಾರಕಿಹೊಳಿ ಸಹೋದರರು ಬ್ರೇಕ್ ಹಾಕಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ಹಾಗೂ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಆಯ್ಕೆಯಾಗಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ಪ್ರತಿ ಡಿಸಿಸಿ ಬ್ಯಾಂಕಿನಿಂದ ಒಬ್ಬರನ್ನು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗುತ್ತದೆ. ನಂತರ ಜಿಲ್ಲಾ ಪ್ರತಿನಿಧಿಗಳು ಸೇರಿಕೊಂಡು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ರಾಜ್ಯದಲ್ಲಿ ಪ್ರತಿಷ್ಠಿತ ಹುದ್ದೆಗಳ ಪಟ್ಟಿಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೂ ವಿಶೇಷ ಸ್ಥಾನಮಾನವಿದ್ದು, ಸಹಕಾರಿ ರಂಗದಲ್ಲಿ ಅನುಭವವಿರುವ ಅನೇಕರಿಗೆ ಇದು ದೊಡ್ಡ ಹುದ್ದೆ ಎಂದು ಪರಿಗಣಿಸಲಾಗುತ್ತದೆ.
ಕಳೆದ ಎರಡು ದಶಕಗಳಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಸವದಿ ಆಯ್ಕೆಯಾಗುತ್ತಿದ್ದರು. ಬೆಳಗಾವಿ ಡಿಸಿಸಿ ಬ್ಯಾಂಕ್ ಮೂಲಕ ಅಪೆಕ್ಸ್ ಬ್ಯಾಂಕ್ಗೆ ಹೋಗುತ್ತಿದ್ದರು. ಆದರೆ ಈ ಬಾರಿ ಆ ಸ್ಥಾನ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಪಾಲಾಗಿದೆ. ಹೀಗಾಗಿ ಮಂತ್ರಿ ಸ್ಥಾನ ಸಿಗದಿದ್ದರೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಬೇಕೆಂಬ ಲಕ್ಷ್ಮಣ ಸವದಿ ಕನಸಿಗೆ ಜಾರಕಿಹೊಳಿ ಬ್ರದರ್ಸ್ ಎಳ್ಳು ನೀರು ಬಿಟ್ಟಿದ್ದಾರೆ.



