ಗದಗ: 2024ರಲ್ಲಿ ನಡೆದಿದ್ದ ಭಾರೀ ಕಳ್ಳತನ ಪ್ರಕರಣದಲ್ಲಿ ಕಳ್ಳತನವಾದ ಸ್ವತ್ತು ಪತ್ತೆಯಾದರೂ ಅದನ್ನು ಕುಟುಂಬಕ್ಕೆ ಮರಳಿಸಿಲ್ಲ ಎಂದು ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗದಗ ನಗರದಲ್ಲಿ ಸಿಪಿಐ ಶಿವಯೋಗಿ ಅವರ ವಿರುದ್ಧ ಮಹಿಳೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಆ ಆಕ್ರೋಶಕ್ಕೆ ಕಾರಣವೇನು ಎಂಬ ಕುರಿತು ತುಳಜಾಬಾಯಿ ಅವರು ತಮ್ಮ ಆರೋಪಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಗದಗ ನಗರದ ಮುಳಗುಂದ ರಸ್ತೆಯ ಅಂಜುಮನ್ ಕಾಲೇಜು ಎದುರಿನ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ 2024ರ ಫೆಬ್ರುವರಿ 28ರಂದು ಹಾಡಹಗಲೇ ಕಳ್ಳತನ ನಡೆದಿತ್ತು ಎಂದು ತುಳಜಾಬಾಯಿ ತಿಳಿಸಿದ್ದಾರೆ. ಕಳ್ಳರು ಮನೆಯಲ್ಲಿದ್ದ ಸುಮಾರು ಒಂದು ಕೆಜಿ ಅಷ್ಟು ಚಿನ್ನ, ಒಂದು ಕೆಜಿ ಬೆಳ್ಳಿ ಹಾಗೂ 36 ಲಕ್ಷ ರೂ. ನಗದು ದೋಚಿಕೊಂಡು ಹೋಗಿದ್ದರು ಎಂದು ಅವರು ದೂರಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಆಗಿದ್ದ ಶಿವಯೋಗಿ ಅವರು ತನಿಖೆಯ ಉಸ್ತುವಾರಿ ವಹಿಸಿದ್ದರು ಎಂದು ಕುಟುಂಬ ತಿಳಿಸಿದೆ.
ಸ್ವತ್ತು ಸಿಕ್ಕಿದೆ ಎಂದು ಹೇಳಿದ್ದರು:
ಕಳ್ಳತನ ನಡೆದ ಕೆಲ ದಿನಗಳ ನಂತರ ಸ್ವತ್ತು ಪತ್ತೆಯಾಗಿದೆ, ಅದನ್ನು ಹಿಂದಿರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಎಂದು ತುಳಜಾಬಾಯಿ ಆರೋಪಿಸಿದ್ದಾರೆ. ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ತಮ್ಮನ್ನು ಸೂಚಿಸಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ. ಆದರೆ, ಪ್ರಕರಣ ನಡೆದು ಸಾಕಷ್ಟು ಸಮಯ ಕಳೆದರೂ ಕಳ್ಳತನವಾದ ಸ್ವತ್ತಿನ ಪೈಕಿ ಯಾವುದನ್ನೂ ತಮಗೆ ಹಿಂದಿರುಗಿಸಲಾಗಿಲ್ಲ ಎಂದು ಅವರು ದೂರಿದ್ದಾರೆ.
ನಕಲಿ ಸಹಿ ಆರೋಪ:
ಪ್ರಕರಣದಲ್ಲಿ ಸ್ವತ್ತು ಪತ್ತೆಯಾಗಿಲ್ಲ ಎಂದು ತಿಳಿಸಿ ನ್ಯಾಯಾಲಯಕ್ಕೆ ಸಿ-ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಆರೋಪಿಸಿರುವ ತುಳಜಾಬಾಯಿ, ಆ ವರದಿಗೆ ತಮ್ಮ ನಕಲಿ ಸಹಿ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಕಳ್ಳತನವಾದ ಚಿನ್ನಾಭರಣಗಳ ಖರೀದಿ ಬಿಲ್ ಹಾಗೂ ಇತರ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ಆದರೂ ತಮ್ಮ ಸ್ವತ್ತು ಮರಳಿ ದೊರೆತಿಲ್ಲ ಎಂದು ಕುಟುಂಬ ಆರೋಪಿಸಿದೆ.
ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಕಳ್ಳತನವಾದ ಚಿನ್ನ, ಬೆಳ್ಳಿ ಹಾಗೂ ನಗದು ಸೇರಿ ಸುಮಾರು ಎರಡು ಕೋಟಿ ರೂ. ಮೌಲ್ಯದ ಸ್ವತ್ತು ಕಳೆದುಕೊಂಡಿದ್ದೇವೆ ಎಂದು ಕುಟುಂಬ ಹೇಳಿಕೊಂಡಿದೆ.
ಗೃಹ ಸಚಿವರ ಮೊರೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿರುವ ತುಳಜಾಬಾಯಿ ಮತ್ತು ಅವರ ಪುತ್ರ ವಿನಾಯಕ, ಇದೀಗ ಗೃಹ ಸಚಿವರ ಮೊರೆ ಹೋಗಿದ್ದಾರೆ.
ಕಳ್ಳತನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಳ್ಳತನವಾದ ಸ್ವತ್ತು ನಿಜವಾಗಿಯೂ ಪತ್ತೆಯಾಗಿತ್ತೇ ಎಂಬುದನ್ನು ಪರಿಶೀಲಿಸಬೇಕು. ತಮ್ಮ ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಹಿಳೆ ಹಾಗೂ ಅವರ ಕುಟುಂಬ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಬೇಕಿದೆ.
ನಮ್ಮ ಮನೆ ಕಳ್ಳತನವಾದ ಬಳಿಕ ಸ್ವತ್ತು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಇದುವರೆಗೆ ಯಾವುದೇ ಸ್ವತ್ತು ನಮಗೆ ಮರಳಿ ದೊರೆತಿಲ್ಲ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು” ಎಂದು ತುಳಜಾಬಾಯಿ ಒತ್ತಾಯಿಸಿದ್ದಾರೆ.

