ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಗೆ ಬೀಗ ಹಾಕಲಾಗಿತ್ತು. ಇದೀಗ ಜಾಲಿವುಡ್ ಸ್ಟುಡಿಯೋದ ಬೀಗ ತೆರೆಯಲು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋ ಬೀಗ ತೆಗೆಯುವಂತೆ ಡಿಸಿಎಂ ಡಿಕೆಶಿ ಸೂಚನೆ ನೀಡ್ತಿದ್ದಂತೆ, ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ರು..
ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ, ಬಿಗ್ಬಾಸ್ ಕನ್ನಡ ಈ ಗೊಂದಲದ ಭಾಗವಾಗಿರಲಿಲ್ಲ, ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ, ಜೊತೆಗೆ ನಲ್ಪಾಡ್ ಅವರ ಪ್ರಯತ್ನಗಳಿಗೆ ಧನ್ಯವಾದಗಳು.
ಕಿಚ್ಚ ಸುದೀಪ್, ನಟ
ನಿನ್ನೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಜಾಲಿವುಡ್ಗೆ ಬೀಗ ಹಾಕುವುದಕ್ಕೂ ಬಿಗ್ಬಾಸ್ ಶೋಗೂ ಸಂಬಂಧವಿಲ್ಲ ಎಂದ ಬಳಿಕ ಕಿಚ್ಚ ಸುದೀಪ್ ಅವರು ಕೆಲ ರಾಜಕಾರಣಿಗಳಿಗೆ ಕರೆ ಮಾಡಿ, ಏನೂ ತಪ್ಪಿಲ್ಲದ ಬಿಗ್ಬಾಸ್ ಶೋ ಅನ್ನು ಮತ್ತೆ ನಡೆಸಿಕೊಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅವರೇ ಹೇಳಿರುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರಂತೆ. ಸುದೀಪ್ ಅವರ ಈ ಕಾರ್ಯದಲ್ಲಿ ನಲಪಾಡ್ ಸಹ ಸಹಾಯ ಮಾಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.
ಬಿಗ್ಬಾಸ್ ಶೋ ಬಂದ್ ಮಾಡಿರುವ ಹಿಂದೆ ರಾಜಕೀಯ ದ್ವೇಷ ಇದೆ ಎಂಬ ಸುದ್ದಿ ನಿನ್ನೆ ಹರಿದಾಡಿತ್ತು. ಸುದೀಪ್ ಈ ಹಿಂದೆ ಬಿಜೆಪಿ ಪರ ನಿಂತಿದ್ದೂ ಸಹ ಬಿಗ್ಬಾಸ್ ಕನ್ನಡ ಶೋ ಬಂದ್ ಆಗಲು ಪರೋಕ್ಷ ಕಾರಣವಾಗಿದೆ ಎಂಬ ಚರ್ಚೆ ನಡೆದಿತ್ತು. ಆದರೆ ಇದೀಗ ಸುದೀಪ್ ಅವರ ಮನವಿಗೆ ಶೀಘ್ರವಾಗಿ ಸ್ಪಂದಿಸಿರುವ ಡಿಸಿಎಂ, ರಾಜಕೀಯ ದ್ವೇಷದ ಆರೋಪಗಳನ್ನ ಅಲ್ಲಗೆಳೆದಿದ್ದಾರೆ.



