ಬಿಹಾರ: ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಜೆಡಿಯು ನಾಯಕ ತೇಜಸ್ವಿ ಯಾದವ್ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮಹಾಘಟಬಂಧನ್ನಲ್ಲಿ ಆಂತರಿಕ ಭಿನ್ನಮತಗಳ ನಡುವೆ ಈ ಘೋಷಣೆಯಾಗಿದ್ದು, ಈ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದಾರೆ.
ಪ್ರತಿಯೊಬ್ಬರೂ ದೇಶದ ಪರಿಸ್ಥಿತಿಯ ಬಗ್ಗೆ ಆತಂಕ ಹೊಂದಿದ್ದಾರೆ. ಇದೇ ಕಾರಣಕ್ಕೆ ನಾನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಹಾಗೂ ಇತರೆ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ನಮ್ಮ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಆಗಿದ್ದಾರೆ. ಅವರು ಯುವ ನಾಯಕ. ದೀರ್ಘ ಭವಿಷ್ಯವನ್ನು ಹೊಂದಿದ್ದು, ಅವರಿಗೆ ಸಾರ್ವಜನಿಕ ಬೆಂಬಲವೂ ಇದೆ ಎಂದರು.
ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಹಾರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರ ಪ್ರಜಾಪ್ರಭುತ್ವಕ್ಕೆ ಬೆದರಿಕೆಯೊಡ್ಡುತ್ತಿದೆ. ಎನ್ಡಿಎ ಸರ್ಕಾರ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುವ ಜೊತೆಗೆ ಧ್ರುವೀಕರಣ ರಾಜಕೀಯ ಮಾಡುತ್ತಿದೆ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ.
ನೀವು ಅವರನ್ನು ಟೀಕಿಸಿದರೆ, ಅವರು ನಿಮ್ಮನ್ನು ಜೈಲಿಗೆ ಹಾಕುತ್ತಾರೆ. ನೀವು ಪತ್ರಕರ್ತ ಅಥವಾ ಕಾರ್ಯಕರ್ತರಾದರೂ ಗಣನೆಗೆ ಬರುವುದಿಲ್ಲ. ದೇಶ ಬಿಹಾರವನ್ನು ಗಮನಿಸುತ್ತಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.