HomeGadag Newsಅರ್ಜಿದಾರರನ್ನು ದಂಗುಬಡಿಸಿದ ಜನನ-ಮರಣ ನೋಂದಣಾಧಿಕಾರಿ

ಅರ್ಜಿದಾರರನ್ನು ದಂಗುಬಡಿಸಿದ ಜನನ-ಮರಣ ನೋಂದಣಾಧಿಕಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಹೆಸರಿನಲ್ಲಿಯೇ ಮರಣ ಪ್ರಮಾಣಪತ್ರ ನೀಡಿ ಅರ್ಜಿದಾರರನ್ನು ದಂಗುಬಡಿಸಿದ ಘಟನೆ ಲಕ್ಷ್ಮೇಶ್ವರ ಪುರಸಭೆಯಲ್ಲಿ ನಡೆದಿದೆ.

ಘಟನೆಯ ವಿವರ: ಪಟ್ಟಣದ ದೇಸಾಯಿಬಣ ವ್ಯಾಪ್ತಿಯ ಅಶೋಕ ಮಹಾದೇವಪ್ಪ ಹಂಪಣ್ಣವರ ಎಂಬ ವ್ಯಕ್ತಿ 1-8-2024ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತನ ಸಹೋದರ ನಾಗರಾಜ ಮಹದೇವಪ್ಪ ಹಂಪಣ್ಣವರ 9-8-2024ರಂದು ಸಹೋದರ ಅಶೋಕನ ಮರಣ ಪ್ರಮಾಣಪತ್ರಕ್ಕಾಗಿ ಪುರಸಭೆಯ ಜನನ-ಮರಣ ನೋಂದಣಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.

7 ತಿಂಗಳ ನಂತರ 11-03-2025ರಂದು ನೋಂದಣಿ ಸಂಖ್ಯೆ 8038/ಟಿ/ಡಿ/2024/000181ರಲ್ಲಿ ಅಶೋಕನ ಮರಣ ದಾಖಲೆಯ ಬದಲಾಗಿ ಅರ್ಜಿ ಸಲ್ಲಿಸಿದ ಸಹೋದರ ನಾಗರಾಜನ ಹೆಸರಿನಲ್ಲಿಯೇ ಪ್ರಮಾಣಪತ್ರ ನೀಡಿ ಜೀವಂತ ಇದ್ದವರನ್ನೇ ಇಲ್ಲದಂತಾಗಿಸಿದ್ದಾರೆ.

ಇದೀಗ ಜೀವಂತ ವ್ಯಕ್ತಿಯ ಆಧಾರ್ ಕಾರ್ಡ್ ರದ್ದಾಗಿ ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳೂ ರದ್ದಾಗಿವೆ. ನಿತ್ಯ ಕೂಲಿ ಮಾಡಿ ಬದುಕುವ ಈ ವ್ಯಕ್ತಿ ತನ್ನದಲ್ಲದ ತಪ್ಪಿಗೆ ಪರಿತಪಿಸುತ್ತಾ ಕಳೆದ 9 ತಿಂಗಳಿಂದ ಈ ತಪ್ಪನ್ನು ಸರಿಪಡಿಸಿಕೊಡುವಂತೆ ಕಚೇರಿಗೆ ಅಲೆಯುತ್ತ ಪರದಾಡುತ್ತಿದ್ದಾನೆ.

ಪ್ರಮಾಣಪತ್ರದ ಪ್ರಮಾದ ಸರಿಪಡಿಸುವಂತೆ ನಿತ್ಯ ಪುರಸಭೆಗೆ ಅಲೆದರೂ ಜನನ-ಮರಣ ನೋಂದಣಿ ಕಾರ್ಯದ ಜವಾಬ್ದಾರಿ ನಿರ್ವಹಿಸುವ ಅಧಿಕಾರಿ ಮಂಜುನಾಥ ಮುದಗಲ್ ತಾವು ಮಾಡಿದ ತಪ್ಪನ್ನು ಮುಚ್ಚಿ ಹಾಕಲು ನೋಂದಣಿ ತಂತ್ರಾಂಶದಲ್ಲಿ ನಜರಚೂಕಿನಿಂದ ತಪ್ಪಾಗಿರುವ ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಲಕ್ಷ್ಮೇಶ್ವರ ತಹಸೀಲ್ದಾರ ಕಚೇರಿಗೆ ಕಳುಹಿಸಿ ಜವಾಬ್ದಾರಿಯಿಂದ ನುಣಚಿಕೊಂಡಿದ್ದಾರೆ.

ಈ ವಿಷಯ ಪತ್ರಕರ್ತರಿಗೆ ಗೊತ್ತಾಗಿದೆ ಎಂದು ಎಚ್ಚೆತ್ತುಕೊಂಡ ಅಧಿಕಾರಿ ಮರಣ ಪ್ರಮಾಣಪತ್ರ ರದ್ದುಪಡಿಸಲು ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಪ್ರಮಾಣಪತ್ರದ ಪ್ರಮಾದ ಸರಿಪಡಿಸುವಂತೆ ಅರ್ಜಿದಾರರು ನಮಗೆ ವಿಷಯ ತಿಳಿಸಿದ್ದರು. ಆಗಲೇ ಅಧಿಕಾರಿ ಮಂಜುನಾಥ ಮುದಗಲ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ಮತ್ತು ನೋಟೀಸ್ ನೀಡಿದ್ದು, ಅವರ ಮೇಲೆ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿದಿದ್ದೇನೆ.

  • ಮಾಹಾಂತೇಶ ಬೀಳಗಿ.
    ಪುರಸಭೆ ಮುಖ್ಯಾಧಿಕಾರಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!