ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಹಸಿದವರಿಗೆ ಅನ್ನ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುವ ಸಮಾಜಮುಖಿ ಕಾರ್ಯಗಳ ಮೂಲಕ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವುದು ಅನುಕರಣೀಯ ಎಂದು ಟಕ್ಕೇದ ದರ್ಗಾದ ಹಜರತ ಸೈಯದ್ ನಿಜಾಮುದ್ದೀನ್ ಶಾ ಮಕಾನದಾರ ಹೇಳಿದರು.
ಸ್ಥಳೀಯ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಡಾ.ಅಬ್ದುಲ್ ಕಲಾಂ ಟ್ರಸ್ಟ್ನ ಅಧ್ಯಕ್ಷ, ವಕೀಲ ರಫೀಕ್ ತೋರಗಲ್ ಅವರ ಜನ್ಮದಿನಾಚರಣೆ ನಿಮಿತ್ತ ನಡೆದ 11 ಸಾವಿರ ನೋಟ್‌ಬುಕ್, ಪೆನ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ, ಎಲ್ಲವೂ ನನಗಿರಲಿ ಎನ್ನುವ ಜೀವನಶೈಲಿಗೆ ಭಾಗಶಃ ಜನರು ಒಗ್ಗಿಕೊಳ್ಳುತ್ತಿದ್ದಾರೆ. ಹಂಚಿ ಉಣ್ಣಬೇಕು ಎನ್ನುವ ಆಶಯವನ್ನು ಜೀವನದಲ್ಲಿ ಅಳವಡಸಿಕೊಂಡವರ ಸಂಖ್ಯೆ ವಿರಳವಿದೆ. ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವವರಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ಕಳೆದ ಹಲವಾರು ವರ್ಷಗಳಿಂದ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ನೋಟ್‌ಬುಕ್, ಪೆನ್ ವಿತರಣೆ ಜತೆಗೆ ಲಾಕ್‌ಡೌನ್ ವೇಳೆ ನೂರಾರು ಜನರಿಗೆ ಆಹಾರದ ಕಿಟ್ ವಿತರಣೆ ಮಾಡಿದ ವಕೀಲ ತೋರಗಲ್ ಅವರ ಸಾಮಾಜಿಕ ಕಾರ್ಯಗಳು ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಡಾ. ಆರ್.ಎಸ್. ಜೀರೆ, ಹಸನ ತಟಗಾರ, ಯಲ್ಲಪ್ಪ ಬಂಕದ, ಎ.ಡಿ. ಕೋಲಕಾರ, ಬಸವರಾಜ ಕೊಟಗಿ, ಖಾಜೇಸಾಬ ಗೊಲಗೇರಿ, ಎಫ್.ಎಸ್. ಕರಿದುರಗನವರ, ಅಂಬಾಸಾ ರಂಗ್ರೇಜ, ಕಳಕಪ್ಪ ಪೋತಾ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಮತ್ತು ರಫೀಕ್ ತೋರಗಲ್ ಅಭಿಮಾನಿ ಬಳಗದ ಸದಸ್ಯರು ಇದ್ದರು.
ಮುಖಂಡ ಎಫ್.ಎಸ್. ಕರಿದುರಗನವರ ಮಾತನಾಡಿ, ಸಮಾಜದಲ್ಲಿ ಬಡವರು, ಶ್ರೀಮಂತರು ಸೇರಿದಂತೆ ಅನೇಕ ಅಸಹಾಯಕ ವರ್ಗದ ಜನರಿರುತ್ತಾರೆ. ಮಾನವೀಯ ಮೌಲ್ಯವುಳ್ಳವರು ತಮ್ಮ ಜನ್ಮದಿನವನ್ನು ಸಮಾಜಮುಖಿಯಾಗಿ ಆಚರಿಸಿಕೊಳ್ಳುವುದು ಅಪರೂಪ. ವಕೀಲ ರಫೀಕ್ ತೋರಗಲ್‌ರಿಂದ ಮತ್ತಷ್ಟು ಸಾಮಾಜಿಕ ಕಾರ್ಯಗಳು ನಡೆಯುವಂತಾಗಲಿ ಎಂದರು.