ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆ ವಿಪರೀತ ಚಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜೊತೆಗೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಚಳಿಯ ಅಬ್ಬರ ನಾಳೆಯೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲವು ಜಿಲ್ಲೆಗಳಲ್ಲಿ ದಾಖಲೆಯ ಮಟ್ಟದ ಚಳಿ ಕಂಡುಬರುವ ಸಾಧ್ಯತೆ ಇದ್ದರೆ, ಇನ್ನೂ ಹಲವೆಡೆ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ಕುಸಿತ ದಾಖಲಾಗಲಿದೆ ಎಂದು ಇಲಾಖೆ ತಿಳಿಸಿದೆ. ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ ಹಾಗೂ ದಕ್ಷಿಣ ಒಳನಾಡಿನ ಮೈಸೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಚಳಿ ತೀವ್ರವಾಗಿರುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿಯೂ ಚುಮು ಚುಮು ಚಳಿಗೆ ಜನ ತತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರದ ಕನಿಷ್ಠ ಉಷ್ಣಾಂಶ 14 ರಿಂದ 18 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುವ ಸಾಧ್ಯತೆ ಇದೆ. ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರವರೆಗಿನ ಅವಧಿಯಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶಗಳ ವಿವರ ಹೀಗಿದೆ: ಬೀದರ್‌ನಲ್ಲಿ 10.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 11.8, ಚಿಕ್ಕಬಳ್ಳಾಪುರದಲ್ಲಿ 11.7, ಕೋಲಾರದಲ್ಲಿ 11.9, ಚಾಮರಾಜನಗರದಲ್ಲಿ 12.2, ಹಾಸನ ಹಾಗೂ ಕಲಬುರಗಿಯಲ್ಲಿ ತಲಾ 12.4, ತುಮಕೂರಿನಲ್ಲಿ 12.5 ಮತ್ತು ವಿಜಯನಗರದಲ್ಲಿ 12.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇನ್ನೂ ಬೆಳಗಾವಿ ಮತ್ತು ಹಾಸನದಲ್ಲಿ 12.4, ಶಿವಮೊಗ್ಗದಲ್ಲಿ 13, ಬಾಗಲಕೋಟೆ ಹಾಗೂ ಬೆಂಗಳೂರು ದಕ್ಷಿಣದಲ್ಲಿ ತಲಾ 13.1, ಗದಗದಲ್ಲಿ 13.2, ಹಾವೇರಿ, ಕೊಪ್ಪಳ ಹಾಗೂ ವಿಜಯಪುರದಲ್ಲಿ ತಲಾ 13.3, ಮಂಡ್ಯ ಮತ್ತು ಮೈಸೂರಿನಲ್ಲಿ 13.4, ಧಾರವಾಡದಲ್ಲಿ 13.5 ಮತ್ತು ದಾವಣಗೆರೆಯಲ್ಲಿ 13.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ 14.6 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ ಮತ್ತು ರಾಯಚೂರಿನಲ್ಲಿ ತಲಾ 14.2, ಚಿತ್ರದುರ್ಗದಲ್ಲಿ 14.1, ಉತ್ತರ ಕನ್ನಡದಲ್ಲಿ 15.7, ಕೊಡಗಿನಲ್ಲಿ 15.3, ಉಡುಪಿಯಲ್ಲಿ 18 ಮತ್ತು ದಕ್ಷಿಣ ಕನ್ನಡದಲ್ಲಿ 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಳಿ ಹೆಚ್ಚಿರುವ ಹಿನ್ನೆಲೆ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.



