ಬೆಂಗಳೂರು:- ಕೇಂದ್ರ ಸಚಿವ ಅಮಿತ್ ಶಾ ಅವರು ಈ ಹಿಂದೆ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ ವಿಷಯ ಡೈವರ್ಟ್ ಮಾಡಲು ನನ್ನ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ನನ್ನ ವಿರುದ್ಧ ಪ್ರತಿಭಟನೆ ಮಾಡಿದ ಬಿಜೆಪಿಗೆ ಮುಖಭಂಗವಾಗಿದೆ. ರಾಜ್ಯಾಧ್ಯಕ್ಷ ಅನುಪಸ್ಥಿತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ ಎಂದರೆ ಪ್ರಕರಣವನ್ನ ಎಷ್ಟು ಗಂಭೀರವಾಗಿ ತಗೆದುಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಅವರು ಹೋರಾಟ ಮಾಡಿದಷ್ಟು, ಕೆದಕಿದಷ್ಟು ಅವರಿಗೆ ಮುಖಭಂಗ ಆಗುತ್ತದೆ ಎಂದು ನಾನು ಮೊದಲೆ ಹೇಳಿದ್ದೆ. ಹಾಗೆಯೇ ಆಗಿದೆ ಎಂದರು.
ಬಿಜೆಪಿ ಮನೆ ಒಂದು ನೂರು ಬಾಗಿಲು ಆಗಿದೆ. ಕೆಲವರು ವಕ್ಫ್ ಅಂತಾರೆ, ಕೆಲವರು ಕೆಎಸ್‌ಆರ್‌ಟಿಸಿಯಲ್ಲಿ ಹೂ ಕೊಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಕಡೆ ಓಡಾಡ್ತಿದಾರೆ. ನಮ್ಮದು ಬುದ್ಧ ಬಸವ ತತ್ವ, ಅವರದು ಮನುಸ್ಮೃತಿ. ಅದಕ್ಕೆ ಅವರಿಗೆ ನನ್ನ ಕಂಡರೆ ಆಗಲ್ಲ. ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಮಾತನಾಡಿದ್ದರು, ವಿವಾದ ಡೈವರ್ಟ್ ಮಾಡೋಕೆ ಈಗ ಬೇರೆ ಆರೋಪ ಮಾಡ್ತಿದಾರೆ. ಅವರನ್ನ ಮೆಚ್ಚಿಸೋಕೆ ಇಲ್ಲಿ ಪ್ರತಿಭಟನೆ ಮಾಡ್ತಿದಾರೆ ಎಂದು ಹೇಳಿದ್ದಾರೆ.