ವಿಜಯಸಾಕ್ಷಿ ಸುದ್ದಿ, ಗದಗ : ನಿಷ್ಠೆ ಎಂಬುದನ್ನು ಗಾಣಿಗ ಸಮಾಜದವರನ್ನು ನೋಡಿ ಕಲಿಯಬೇಕು. ಪ್ರಮಾಣಿಕತೆ, ಸೇವಾಮನೋಭಾವ ಗಾಣಿಗ ಸಮಾಜಕ್ಕೆ ಒಲಿದು ಬಂದಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಎಪಿಎಂಸಿ ಆವರಣದಲ್ಲಿರುವ ಬಸಪ್ಪ ಬಡ್ನಿ ಅವರ ಜಾಗದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಗಾಣಿಗ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಾಣಿಗ ಸಮಾಜದವರು ಜಾತಿ, ಮತ, ಪಂಥ ನೋಡದೇ ಮತ ನೀಡುವ ಮೂಲಕ ನನ್ನ ಗೆಲುವಿಗೆ ಕಾರಣರಾಗಿದ್ದೀರಿ. ಅದೇ ರೀತಿ ಸುಶಿಕ್ಷಿತ, ಕ್ರಿಯಾಶೀಲವಾಗಿರುವ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಅವರನ್ನೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲ ಅವರ ಮೇಲಿನ ಪ್ರೀತಿ-ವಿಶ್ವಾಸದಿಂದ ನಮ್ಮ ಬೆಳವಣಿಗೆಯಲ್ಲಿ ತಮ್ಮ ಪಾತ್ರ ಹೆಚ್ಚಿದೆ. ನಮ್ಮನ್ನು ಬೆಳೆಸಿದ ರೀತಿಯಲ್ಲಿ ಸಾತ್ವಿಕ ಯುವನಾಯಕ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಆಶೀರ್ವದಿಸುವ ಮೂಲಕ ಬೆಳೆಸಬೇಕು ಎಂದು ಹೇಳಿದರು.
ಮುಖಂಡ ಮುರುಘರಾಜೇಂದ್ರ ಬಡ್ನಿ ಮಾತನಾಡಿದರು. ಮುಖಂಡರಾದ ಷಣ್ಮುಖಪ್ಪ ಬಡ್ನಿ, ಗಿರಿಯಪ್ಪ ಅಸೂಟಿ, ಅಂದಪ್ಪ ಬಿಂಗಿ, ಐ.ಎಂ. ಕಿರೇಸೂರ, ರಮೇಶ ಕರಿಕಟ್ಟಿ, ಶಿವಪ್ಪ ಇಟ್ನಳ್ಳಿ, ರಮೇಶ ಮಂದಾಲಿ, ಬಸಪ್ಪ ಕಲಬಂಡಿ, ರುದ್ರಪ್ಪ ಕಲಬಂಡಿ ಇದ್ದರು. ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸ್ವಾಗತಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗದಗ ತಾಲೂಕು ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ನಿರೂಪಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಎರಡು ಬಾರಿ ಬಿಜೆಪಿಗೆ ಹಾಗೂ ಅವರ ನಾಯಕರಿಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದೀರಿ. ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ತರಲು ಎಂಎಸ್‌ಪಿ ಕಾನೂನು ಜಾರಿ ಮಾಡುತ್ತೇವೆ. ರೈತರ ಸಾಲ ಮನ್ನಾ ಮಾಡುತ್ತೇವೆ. ದೇಶದಲ್ಲಿ ರೈತರು ಬದುಕಬೇಕಾದರೆ ಬಿಜೆಪಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.


