ಆನೇಕಲ್: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆಮಾಡಿತ್ತು. ಮೈಸೂರು ಜಂಬೂಸವಾರಿ ನೋಡಲು ಜನರು ಕಾತರದಿಂದ ಕಾಯುತ್ತಿದ್ದರೆ, ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ಮಾತ್ರ ಭೀಕರ ಕೊಲೆಯೊಂದು ನಡೆದಿದೆ.
ದಸರಾ ಅಂಬಾರಿ ನೋಡಲು ಬಂದಿದ್ದ 56 ವರ್ಷದ ಯಲ್ಲಪ್ಪ ಎಂಬುವವರನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲ, ಕೊಲೆಯಾದ ವ್ಯಕ್ತಿಯ ಮೊಬೈಲ್ನಿಂದಲೇ ಪೊಲೀಸರ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಮದ್ಯಪಾನದ ವೇಳೆ ಗಲಾಟೆ ನಡೆದಿತ್ತಾ?
ಆನೇಕಲ್ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ಈ ಘಟನೆ ನಡೆದಿದೆ. ತಮಿಳುನಾಡಿನ ಸಾರಕ್ಕನಪಲ್ಲಿ ಗ್ರಾಮದ ಯಲ್ಲಪ್ಪ ಕಳೆದ 18 ವರ್ಷಗಳಿಂದ ಪತ್ನಿ ಕಾಂತಮ್ಮ ಅವರೊಂದಿಗೆ ತಟ್ನಹಳ್ಳಿಯಲ್ಲಿ ವಾಸವಾಗಿದ್ದರು. ಈ ಹಿಂದೆ ಬ್ಯಾಗಡದೇನಹಳ್ಳಿ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದ ಅವರು, ಇತ್ತೀಚೆಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಅಕ್ಟೋಬರ್ 21ರಂದು ದಸರಾ ಅಂಬಾರಿ ನೋಡಲು ಆನೇಕಲ್ಗೆ ಬಂದಿದ್ದ ಯಲ್ಲಪ್ಪ, ಸಂಜೆ ಸುಮಾರು 6.30ರ ವೇಳೆಗೆ ಪತ್ನಿಗೆ ಕರೆ ಮಾಡಿ ತಾನು ಜಂಬೂಸವಾರಿ ನೋಡಲು ಬಂದಿರುವುದಾಗಿ ತಿಳಿಸಿದ್ದರು. ಆದರೆ, ಮನೆಗೆ ವಾಪಸಾಗಬೇಕಿದ್ದ ಯಲ್ಲಪ್ಪ ಕೊನೆಗೆ ಹೆಣವಾಗಿ ಪತ್ತೆಯಾಗಿದ್ದಾರೆ.
ರಾತ್ರಿ ಚಿಕ್ಕಕೆರೆ ಸ್ಟೇಡಿಯಂ ಬಳಿ ಮದ್ಯಪಾನ ಮಾಡುವ ವೇಳೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಯಲ್ಲಪ್ಪನ ತಲೆಗೆ ರಿಪೀಸ್ನಿಂದ ಬಲವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.
ಮೃತನ ಮೊಬೈಲ್ನಿಂದಲೇ 112ಕ್ಕೆ ಕರೆ!
ಹಲ್ಲೆಯ ಬಳಿಕ ಯಲ್ಲಪ್ಪನ ಮೊಬೈಲ್ನಿಂದಲೇ 112ಕ್ಕೆ ಕರೆ ಮಾಡಲಾಗಿದೆ. ಮಾಹಿತಿ ಪಡೆದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಯಲ್ಲಪ್ಪನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮತ್ತೊಂದೆಡೆ, ಆರೋಪಿಗಳು ಯಲ್ಲಪ್ಪನ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೃತನ ಎಟಿಎಂ ಕಾರ್ಡ್ ಬಳಸಿ ಹಣವನ್ನೂ ಡ್ರಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ ಪ್ರಕಾಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೊಬೈಲ್ ಕರೆಗಳ ವಿವರ, ಸ್ಥಳದ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಹಾರಗದ್ದೆ ಬಳಿ ಮೊಬೈಲ್ ಸ್ವಿಚ್ ಆಫ್ ಆಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಎಸ್ಪಿ ಚಂದ್ರಕಾಂತ್ ತಿಳಿಸಿದ್ದಾರೆ.
ಒಟ್ಟಿನಲ್ಲಿ, ದಸರಾ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದ ಯಲ್ಲಪ್ಪನ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮದ್ಯಪಾನದ ವೇಳೆ ನಡೆದ ಗಲಾಟೆಯೇ ಕೊಲೆಗೆ ಕಾರಣವಾಯಿತೇ ಅಥವಾ ಬೇರೆ ಯಾವುದಾದರೂ ಉದ್ದೇಶವಿತ್ತೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.









