ಗದಗ: ಗದಗ ಜಿಲ್ಲಾಧಿಕಾರಿ ಕಚೇರಿಯನ್ನ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಮೇಲ್ ಸಂದೇಶದಲ್ಲಿ ಅರ್ನಾ ಅಶ್ವಿನ್ ಶೇಖರ್ ಎಂಬ ಹೆಸರಿನಿಂದ ಡಿಸಿ ಕಚೇರಿಯ ಐದು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅದರಲ್ಲಿ ಮಾಹಿತಿ ಇತ್ತು.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಧಿಕಾರಿಗಳ ಇ ಮೇಲ್ ಗೆ ಈ ಸಂದೇಶ ಬಂದಿತ್ತು. ಇ-ಮೇಲ್ ಮೆಸೇಜ್‌ನಿಂದಾಗಿ ಕೆಲಕಾಲ ಜಿಲ್ಲಾಡಳಿತ ಭವನದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಂಗಾಲಾದರು.
ವಿಷಯ ತಿಳಿದು ಸ್ಥಳಕ್ಕೆ ಶ್ವಾನ ದಳದೊಂದಿಗೆ ಬಾಂಬ್ ಸ್ಕ್ವಾಡ್ ದೌಡಾಯಿಸಿ ಜಿಲ್ಲಾಡಳಿತ ಭವನದ ಇಂಚಿಂಚೂ ಶೋಧ ನಡೆಸಿದರು. ಜಿಲ್ಲಾಧಿಕಾರಿಗಳ ಕೊಠಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸರ್ಚ್ ಮಾಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಜಿಲ್ಲಾಡಳಿತ ಭವನದಲ್ಲಿ ವಿವಿಧ ಕಚೇರಿಗಳನ್ನು ಪರಿಶೀಲನೆ ನಡೆಸಲಾಯಿತು.
ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಇದರಿಂದಾಗಿ ಇದೊಂದು ಹುಸಿ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಬಾಂಬ್ ಬೆದರಿಕೆಗಳ ಭಾಗವಾಗಿರಬಹುದು ಎನ್ನಲಾಗಿದೆ.
ತಮಿಳುನಾಡು ಚುನಾವಣೆ ಸಮಯದಲ್ಲಿ ಗಮನ ಬೇರೆಡೆ ಸೆಳೆಯುವ ಯತ್ನ ಇದಾಗಿರಬಹುದು ಎನ್ನಲಾಗಿದೆ. ತಮಿಳುನಾಡಿನ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಸೇರಿ ಪಾಕಿಸ್ತಾನ ಐಎಸ್ಐ ಸಂಸ್ಥೆ ಸ್ಫೋಟಿಸಲು ಸಂಚು ಎಂದು ಈ ಮೇಲ್ ನಲ್ಲಿ ಬರೆಯಲಾಗಿದೆ.
ಡಿವೈಎಸ್ಪಿ ಮುರ್ತುಜಾ ಖಾಜಿ, ಸಿಪಿಐಗಳಾದ ಲಾಲ್‌ಸಾಬ್ ಜೂಲಕಟ್ಟಿ, ಸಿದ್ದರಾಮೇಶ, ಪಿಎಸ್ಐ ವ್ಹಿ ಜಿ ಪವಾರ ಸೇರಿದಂತೆ ಸೇರಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.



