ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ದುಷ್ಕರ್ಮಿಗಳು ಇ-ಮೇಲ್ ಮೂಲಕ ಈ ಬೆದರಿಕೆ ಸಂದೇಶ ರವಾನಿಸಿದ್ದಾರೆ.
ನವೆಂಬರ್ 29ರಂದು ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 20ರಿಂದ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಇದೀಗ ಕಾರ್ಯಕ್ರಮಕ್ಕೆ ಬೆದರಿಕೆ ಸಂದೇಶ ಬಂದಿದ್ದು, ಇ-ಮೇಲ್ನಲ್ಲಿ ಹಲವು ಎಚ್ಚರಿಕೆಗಳನ್ನು ನೀಡಲಾಗಿದೆ. ಸಂಗೀತ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬರಬಾರದು ಹಾಗೂ ಮಕ್ಕಳನ್ನು ಕರೆತರಬಾರದು ಎಂದು ದುಷ್ಕರ್ಮಿಗಳು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ‘ಖಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯನ್ನೂ ಬರೆಯಲಾಗಿದೆ.
ಈ ಬೆದರಿಕೆ ಇ-ಮೇಲ್ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕಚೇರಿಯ ಅಧಿಕೃತ ಇ-ಮೇಲ್ ವಿಳಾಸಕ್ಕೆ ತಲುಪಿದೆ. ಘಟನೆ ಸಂಬಂಧ ಬೆಂಗಳೂರು ಉತ್ತರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.









