ಪುಸ್ತಕವನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಹೇಳಲಾಗುತ್ತದೆ. ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುವುದರ ಜೊತೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹೆಚ್ಚಿನವರು ಸ್ಮಾರ್ಟ್‌ಫೋನ್‌ಗಳಲ್ಲೇ ಸಮಯ ಕಳೆಯುತ್ತಿದ್ದಾರೆ. ಇದರಿಂದ ಲಾಭಕ್ಕಿಂತ ಒತ್ತಡವೇ ಹೆಚ್ಚು ಉಂಟಾಗುತ್ತದೆ. ಹೀಗಾಗಿ ಪ್ರತಿದಿನ ಸ್ವಲ್ಪ ಸಮಯವಾದರೂ ಮೊಬೈಲ್‌ನ್ನು ಬದಿಗಿಟ್ಟು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಅಗತ್ಯವೆನ್ನಲಾಗಿದೆ.
ಪುಸ್ತಕ ಓದುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳು ಇಂತಿವೆ:
ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ:
ಓದುವುದು ಮೆದುಳಿನ ವ್ಯಾಯಾಮದಂತಿದೆ. ಪುಸ್ತಕ ಓದುವಾಗ ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಆಲೋಚನೆಗಳು ಹಾಗೂ ಮಾಹಿತಿಯನ್ನು ವಿಶ್ಲೇಷಿಸುತ್ತದೆ. ನಿಯಮಿತ ಓದುವ ಅಭ್ಯಾಸವು ಚಿಂತನಾ ಶಕ್ತಿ ಮತ್ತು ಗ್ರಹಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಂಶೋಧನೆಗಳ ಪ್ರಕಾರ, ಇದು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಒತ್ತಡ ನಿವಾರಣೆ:
ವೇಗದ ಜೀವನಶೈಲಿಯಲ್ಲಿ ಒತ್ತಡ ಸಾಮಾನ್ಯವಾಗಿದೆ. ಆದರೆ ಪುಸ್ತಕ ಓದುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡ, ಆತಂಕ ಅಥವಾ ಖಿನ್ನತೆಯ ಸಂದರ್ಭಗಳಲ್ಲಿ ಪುಸ್ತಕ ಓದುವುದರಿಂದ ಮನಸ್ಸು ಹಗುರವಾಗುತ್ತದೆ.
ಭಾಷಾ ಕೌಶಲ್ಯ ಅಭಿವೃದ್ಧಿ:
ಪ್ರತಿದಿನ ಪುಸ್ತಕ ಓದುವುದರಿಂದ ಶಬ್ದಕೋಶ ವೃದ್ಧಿಯಾಗುತ್ತದೆ. ಹೊಸ ಪದಗಳ ಪರಿಚಯದಿಂದ ಮಾತನಾಡುವ ಮತ್ತು ಬರೆಯುವ ಕೌಶಲ್ಯ ಸುಧಾರಿಸುತ್ತದೆ. ಪುಸ್ತಕ ಓದುವ ಮಕ್ಕಳು ಹಾಗೂ ವಯಸ್ಕರು ಉತ್ತಮ ಭಾಷಾ ನೈಪುಣ್ಯ ಹೊಂದಿರುತ್ತಾರೆ.
ನಿದ್ರೆಯ ಗುಣಮಟ್ಟ ಸುಧಾರಣೆ:
ಮಲಗುವ ಮುನ್ನ ಪುಸ್ತಕ ಓದುವ ಅಭ್ಯಾಸ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಓದುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುವುದರಿಂದ ಉತ್ತಮ ನಿದ್ರೆ ಸಾಧ್ಯವಾಗುತ್ತದೆ.
ಗಮನಶಕ್ತಿ ವೃದ್ಧಿ:
ಪುಸ್ತಕ ಓದುವಾಗ ಕಥೆ ಅಥವಾ ವಿಷಯದ ಮೇಲೆ ಸಂಪೂರ್ಣ ಗಮನ ಕೇಂದ್ರೀಕೃತವಾಗುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಆತ್ಮವಿಶ್ವಾಸ ಹೆಚ್ಚಳ:
ಓದು ವ್ಯಕ್ತಿಯ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಜೀವನದ ವಿವಿಧ ಆಯಾಮಗಳ ಬಗ್ಗೆ ಅರಿವು ಮೂಡಿಸಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಪ್ರತಿದಿನ ಸ್ವಲ್ಪ ಸಮಯವಾದರೂ ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ, ಮನಸ್ಸು ಆರೋಗ್ಯವಾಗಿದ್ದು ಜೀವನದ ಗುಣಮಟ್ಟವೂ ಉತ್ತಮವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.



