ಬೆಂಗಳೂರು: ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಲಾಗಿದ್ದು, ದುರಂತಕ್ಕೆ ಆರೋಗ್ಯ ಇಲಾಖೆ ಇಂಜಿನಿಯರ್‌ಗಳು, ಗುತ್ತಿಗೆದಾರರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ.
ತನಿಖಾ ವರದಿಯ ಪ್ರಕಾರ, ಗೋಡೆಯ ಪಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸುರಿದಿರುವುದೇ ದುರಂತಕ್ಕೆ ಮೂಲ ಕಾರಣವಾಗಿದೆ. ಗೋಡೆ ಸಮೀಪ ಸುರಿದಿದ್ದ ಮಣ್ಣನ್ನು ಸೂಕ್ತ ಸಮಯದಲ್ಲಿ ತೆರವುಗೊಳಿಸಲು ಗುತ್ತಿಗೆದಾರರು ಹಾಗೂ ಆರೋಗ್ಯ ಇಲಾಖೆ ಇಂಜಿನಿಯರ್‌ಗಳು ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಸುಮಾರು 8 ಅಡಿ ಎತ್ತರದ ಗೋಡೆಯ ಪಕ್ಕದಲ್ಲಿ 6 ಅಡಿ ಎತ್ತರದವರೆಗೆ ಮಣ್ಣು ಸುರಿಯಲಾಗಿತ್ತು. ಜೊತೆಗೆ, ಗೋಡೆ ಸಮೀಪ ಕ್ರಿಕೆಟ್ ಆಡಲು ನೆಟ್ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಮಣ್ಣು ಹಾಕಲಾಗಿತ್ತು ಎಂಬ ಮಾಹಿತಿ ಕೂಡ ತನಿಖೆಯಲ್ಲಿ ಬಹಿರಂಗವಾಗಿದೆ.
ಸಿಎಸ್ಆರ್ ನಿಧಿಯಡಿ ದಾನಿಯೊಬ್ಬರ ಸಹಕಾರದಿಂದ ಆಸ್ಪತ್ರೆ ಆವರಣದಲ್ಲಿ ಸ್ಟೇಡಿಯಂ ಮಾದರಿಯ ವ್ಯವಸ್ಥೆ ನಿರ್ಮಿಸಲು ಮುಂದಾಗಲಾಗಿತ್ತು. ಆದರೆ, ಈ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೂ ದುರಂತಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.



