ನವರಾತ್ರಿಯ ಎರಡನೇ ದಿನವಾಗಿದೆ. ಈ ದಿನ, ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದು ಕರೆಯಲಾಗುತ್ತದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳನ್ನು ಪಡೆದುಕೊಳ್ಳುತ್ತಾನೆ.
ಎರಡನೇ ದಿನದ ಹಿನ್ನೆಲೆಯೇನು?
ದಕ್ಷಮಹಾರಾಜನ ಮಗಳಾದ ಸತೀ ದೇವಿ ಯಜ್ಞದ ಬೆಂಕಿಗೆ ಆಹುತಿಯಾದ ನಂತರ, ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಪಾರ್ವತಿ ಜನಿಸುತ್ತಾಳೆ. ಹಾಗಾಗಿ ಇವಳನ್ನು ಹೇಮವತಿ ಎಂದೂ ಕರೆಯಲಾಗುತ್ತದೆ. ಬಳಿಕ ಈಕೆ ಯೌವನಾವಸ್ಥೆಗೆ ಬಂದಾಗ ನಾರದ ಮುನಿಯ ಸಲಹೆಯಂತೆ, ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಈಶ್ವರನನ್ನು ಮತ್ತೆ ವರಿಸಲು ತಪಸ್ಸಿನ ಹಾದಿ ಹಿಡಿದು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಅನುಸರಿಸುತ್ತಾಳೆ.
ಅನೇಕ ವರ್ಷಗಳವರೆಗೂ ಆಹಾರ ಮತ್ತು ನೀರಿಲ್ಲದೇ ತಪಸ್ಸನ್ನು ಮಾಡಿ “ಅಪರ್ಣಾ”, “ಉಮಾ” ಎಂಬೆಲ್ಲಾ ಹೆಸರುಗಳಿಂದ ಪ್ರಖ್ಯಾತಳಾಗುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿತು ಎಂದು ನಂಬಲಾಗಿದೆ. ಅವಳ ತಪಸ್ಸಿಗೆ ಕೊನೆಯಲ್ಲಿ ಬ್ರಹ್ಮನು ಪ್ರತ್ಯಕ್ಷನಾಗಿ’ ಇದುವರೆಗೂ ಯಾರೂ ಮಾಡದಂತಹ ಕಠಿಣ ತಪಸ್ಸನ್ನು ಮಾಡಿದ್ದಕ್ಕಾಗಿ ಆಕೆಗೆ, ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ’ ಎಂದು ಆಶೀರ್ವದಿಸುತ್ತಾನೆ. ಬಳಿಕ ಅವಳ ತಪಸ್ಸಿಗೆ ಈಶ್ವರನೂ ಮೆಚ್ಚಿ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.
ಎರಡನೇ ದಿನದ ಪೂಜಾ ಮಹತ್ವವೇನು?
ಈ ದಿನ ದೇವಿಗೆ ತಪ್ಪದೇ ಮಲ್ಲಿಗೆ ಹೂವನ್ನು ಅರ್ಪಿಸುವುದು ತುಂಬಾ ಉತ್ತಮ. ಜೊತೆಗೆ ತುಪ್ಪದ ದೀಪ ಬೆಳಗಿಸಿ ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ದೇವಿಯ ಆಶೀರ್ವಾದ ಲಭಿಸುತ್ತದೆ. ಜೊತೆಗೆ ಈ ದಿನ ಬ್ರಹ್ಮಚಾರಿಣಿ ಮಂತ್ರವನ್ನು ಕೂಡ ಓದಬೇಕು, ಆಗ ದೇವಿ ಸಂತುಷ್ಟಳಾಗಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೈವೇದ್ಯವನ್ನು ಅರ್ಪಿಸಿ ಆರತಿ ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.
ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡುವುದರಿಂದ ದೇವಿ ಸಂತುಷ್ಟಳಾಗುತ್ತಾಳೆ ಎಂಬ ನಂಬಿಕೆ ಇದೆ. ಅದರಲ್ಲಿಯೂ ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸುವುದರಿಂದ ಬೇಡಿದ ವರಗಳನ್ನು ಕರುಣಿಸ್ತಾಳೆ. ಜೊತೆಗೆ ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ ಎಂಬ ಪ್ರತೀತಿ ಇದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಕೆಲಸದಲ್ಲೂ ನೆಮ್ಮದಿ ದೊರೆಯುವುದು ಎಂಬ ನಂಬಿಕೆ ಇದೆ.