ಶಿವಮೊಗ್ಗ: ದುಬಾರೆ ಆನೆ ಬಿಡಾರದಲ್ಲಿ ನಡೆದ ದಾರುಣ ಘಟನೆ ಬಳಿಕ ಶಿವಮೊಗ್ಗದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರವನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಮುಚ್ಚಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಮೊದಲ ಹಂತದಲ್ಲಿ ಆನೆಗಳ ಸ್ನಾನ ಹಾಗೂ ಪ್ರವಾಸಿಗರು ಆನೆಗಳನ್ನು ಸ್ಪರ್ಶಿಸುವುದಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇದೀಗ ಯಾವುದೇ ಅಪಾಯ ಸಂಭವಿಸದಂತೆ ತಡೆಯಲು ಪ್ರವಾಸಿಗರ ಪ್ರವೇಶವನ್ನೇ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಗಾಜನೂರು ಸಮೀಪ ತುಂಗಾ ಹಿನ್ನೀರಿನ ಪ್ರದೇಶದಲ್ಲಿರುವ ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಿಶೇಷವಾಗಿ ಆನೆ ಸ್ನಾನ ವೀಕ್ಷಣೆ ಹಾಗೂ ಆನೆಗಳೊಂದಿಗೆ ಸಮಯ ಕಳೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು.
ಇತ್ತೀಚೆಗೆ ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಎರಡು ಸಾಕಾನೆಗಳ ನಡುವೆ ನಡೆದ ಕಾಳಗ ದುರಂತಕ್ಕೆ ಕಾರಣವಾಗಿತ್ತು. ನಿಯಂತ್ರಣ ತಪ್ಪಿದ ಆನೆ ದಾಳಿ ನಡೆಸಿದ ಪರಿಣಾಮ ತಮಿಳುನಾಡಿನ ಮಹಿಳಾ ಪ್ರವಾಸಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು.
ಈ ಘಟನೆ ಬೆನ್ನಲ್ಲೇ ರಾಜ್ಯದ ಎಲ್ಲಾ ಆನೆ ಬಿಡಾರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮರುಪರಿಶೀಲಿಸಲಾಗುತ್ತಿದ್ದು, ಹೊಸ ಎಸ್‌ಒಪಿ ಜಾರಿಯಾಗುವವರೆಗೆ ಸಕ್ರೆಬೈಲು ಬಿಡಾರ ಪ್ರವಾಸಿಗರಿಗೆ ಬಂದ್ ಆಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



