ಚನ್ನಪಟ್ಟಣ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್, ವೀಕ್ಷಣೆ ಹಾಗೂ ಫಾಲೋವರ್ಸ್ ಪಡೆಯುವ ಉದ್ದೇಶದಿಂದ ಅಪಾಯಕಾರಿ ಬೈಕ್ ವೀಲಿಂಗ್ ನಡೆಸುತ್ತಿದ್ದ 9 ಅಪ್ರಾಪ್ತ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕರು ವೀಲಿಂಗ್ಗೆ ಬಳಸುತ್ತಿದ್ದ 13 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಹಾಗೂ ಚನ್ನಪಟ್ಟಣದ ಹಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಯುವಕರು ಅಪಾಯಕಾರಿ ಬೈಕ್ ಸ್ಟಂಟ್ಗಳನ್ನು ನಡೆಸುತ್ತಿದ್ದರು. ಬೈಕ್ಗಳ ಸೈಲೆನ್ಸರ್ಗಳನ್ನು ಮಾರ್ಪಾಡು ಮಾಡಿ ಕರ್ಕಶ ಶಬ್ದದೊಂದಿಗೆ ವೀಲಿಂಗ್ ಮಾಡುತ್ತಿದ್ದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗಳು ವೈರಲ್ ಆಗಿ ಸಾರ್ವಜನಿಕರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದವು.
ವಿಷಯ ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ವಿಶೇಷ ತಂಡ ರಚಿಸಿದ ಪೊಲೀಸರು, ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಆರು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದರು.
ಬೆಂಗಳೂರು, ಮಂಡ್ಯ, ಮೈಸೂರು ಹಾಗೂ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 9 ಅಪ್ರಾಪ್ತರನ್ನು ಬಂಧಿಸಲಾಯಿತು. ಅಪ್ರಾಪ್ತರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಯುವಕರು ಹಾಗೂ ಅವರ ಪೋಷಕರಿಗೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ರಸ್ತೆಗಳಲ್ಲಿ ವೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ಗಳನ್ನು ನಡೆಸುವುದರಿಂದ ತಮ್ಮ ಜೀವಕ್ಕೆ ಮಾತ್ರವಲ್ಲದೆ, ಇತರ ವಾಹನ ಸವಾರರ ಜೀವಕ್ಕೂ ಅಪಾಯವಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.



