ರಾಯಚೂರು: ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಇ-ಖಾತೆ ಮಾಡಿಕೊಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಸುರೇಶ್ ಶೆಟ್ಟಿ, ರಾಘವೇಂದ್ರ ರೆಡ್ಡಿ ಎಂಬವರಿಂದ 1 ಲಕ್ಷ ರೂ. ಅಡ್ವಾನ್ಸ್ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿದೆ. ಹಣ ಸ್ವೀಕರಿಸುವಾಗಲೇ ದಾಳಿ ನಡೆದಿದ್ದು, ಅಧಿಕಾರಿಯನ್ನು ಸ್ಥಳದಲ್ಲೇ ಹಿಡಿಯಲಾಗಿದೆ.
ಲೋಕಾಯುಕ್ತರು ದಾಳಿ ನಡೆಸುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ ಸುರೇಶ್ ಶೆಟ್ಟಿ, ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಆರೋಪಿಯನ್ನು ಕವಿತಾಳ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಪಂಚನಾಮೆ ಕಾರ್ಯ ನಡೆಯುತ್ತಿದೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ವಿಜಯಕುಮಾರ್, ಅಮರೇಶ್ ನಡೆಸಿದ್ದಾರೆ.



