ಬೆಂಗಳೂರು:- ಬಡ ಹೆಣ್ಣುಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಖತರ್ನಾಕ್ ದಂಪತಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ದಂಪತಿಯನ್ನು ಪ್ರಕಾಶ್, ಪಾರಿಜಾತ ಎಂದು ಗುರುತಿಸಲಾಗಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ ಆರೋಪಿಗಳು ಬಡ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಬಡ ಹೆಣ್ಣುಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸ್ತಿದ್ರು. ಬಳಿಕ ವೇಶ್ಯಾವಾಟಿಕೆ ಅಡ್ಡೆಗೆ ದೂಡುತ್ತಿದ್ದರು.
ಆರೋಪಿ ಪ್ರಕಾಶ್, ಪಾರಿಜಾತ ದಂಪತಿ ಕರ್ನಾಟಕದ ಹೆಣ್ಣುಮಕ್ಕಳನ್ನು ಕರೆದೊಯ್ದು ತಮಿಳುನಾಡು, ಪಾಂಡಿಚೇರಿ ರೆಸಾರ್ಟ್ಗಳಲ್ಲಿ ದಂಧೆ ನಡೆಸ್ತಿದ್ದರು. ಮದುವೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಪ್ರತಿ ವಾರಕ್ಕೊಮ್ಮೆ ಬೆಂಗಳೂರಿನಿಂದ ತಮಿಳುನಾಡಿಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರು.
ಹೊರ ರಾಜ್ಯದ ಶ್ರೀಮಂತರು, ಉದ್ಯಮಿಗಳು, ರೆಸಾರ್ಟ್ಗಳಿಗೆ ಭೇಟಿ ನೀಡ್ತಿದ್ದವರ ಬಳಿ ಈ ಅಮಾಯಕ ಹೆಣ್ಣುಮಕ್ಕಳನ್ನು ದೂಡುತ್ತಿದ್ದರು. ಅಷ್ಟೇ ಅಲ್ಲದೆ ಐಷಾರಾಮಿ ವೇಶ್ಯಾವಾಟಿಕೆ ಪಾರ್ಟಿಯಲ್ಲಿ ಈ ದಂಪತಿ ಮದ್ಯ ಒದಗಿಸುತ್ತಿದ್ದರು. ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25,000 ದಿಂದ 50 ಸಾವಿರದವರೆಗೂ ನಿಗದಿ ಮಾಡಲಾಗುತ್ತಿತ್ತು.
ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದ್ದು ಸದ್ಯ ನಾಲ್ವರು ಯುವತಿಯರ ರಕ್ಷಣೆ ಮಾಡಲಾಗಿದೆ. ಹಾಗೂ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ.