ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದ ಬಯೋಫಾರ್ಮಾ ವಲಯವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಬಯೋಫಾರ್ಮಾ ಶಕ್ತಿ ಕಾರ್ಯಕ್ರಮ’ದಡಿ 10,000 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಈ ಮಹತ್ವದ ಘೋಷಣೆ ಮಾಡಿದರು.
ಈ ಯೋಜನೆಯ ಮೂಲಕ ಬಯೋಫಾರ್ಮಾ ಹಾಗೂ ಬಯೋಸಿಮಿಲರ್ಗಳಿಗೆ ಸಮಗ್ರ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ. ಜೊತೆಗೆ ಕಾರ್ಯತಂತ್ರದ ಮತ್ತು ಗಡಿನಾಡಿನ ವಲಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಕ್ಕೂ ಒತ್ತು ನೀಡಲಾಗುವುದು ಎಂದು ವಿತ್ತ ಸಚಿವೆ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತೀಯ ಆರ್ಥಿಕತೆ ಹಣಕಾಸಿನ ಶಿಸ್ತು ಹಾಗೂ ನಿರಂತರ ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಾಕ್ಚಾತುರ್ಯಕ್ಕಿಂತ ಸುಧಾರಣೆಯ ಮಾರ್ಗವನ್ನು ಆಯ್ದುಕೊಂಡಿದ್ದು, ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯನ್ನು ದಿಕ್ಸೂಚಿಯಾಗಿ ಮಾಡಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು.
ನಾವು ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 12 ವರ್ಷಗಳಲ್ಲಿ ಭಾರತದ ಆರ್ಥಿಕ ಪಥವು ಸ್ಥಿರತೆ, ಹಣಕಾಸಿನ ಶಿಸ್ತು, ನಿರಂತರ ಬೆಳವಣಿಗೆ ಮತ್ತು ನಿಯಂತ್ರಿತ ಹಣದುಬ್ಬರದಿಂದ ಗುರುತಿಸಲ್ಪಟ್ಟಿದೆ ಎಂದು ಸೀತಾರಾಮನ್ ವಿವರಿಸಿದರು.



