ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಆರ್ಡಿಪಿಆರ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ “ಗುಂಡು-ತುಂಡು ಪಾರ್ಟಿ” ನಡೆಸಿದ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಎಇಇ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಆರ್ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್ಡಿಎ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಅವರು ಕಚೇರಿಯಲ್ಲೇ ಪಾರ್ಟಿ ನಡೆಸಿದ ಆರೋಪ ಕೇಳಿಬಂದಿತ್ತು. ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಿ ಕಚೇರಿಯಲ್ಲಿ ನಿವೃತ್ತ ನೌಕರರು ಹಾಗೂ ಹೊರಗಿನ ವ್ಯಕ್ತಿಗಳನ್ನು ಕರೆಸಿ ಪಾರ್ಟಿ ನಡೆಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ನಂತರ ಇಲಾಖಾ ವಿಚಾರಣೆ ಬಾಕಿ ಇಟ್ಟು, ಮೂವರನ್ನೂ ಅಮಾನತು ಮಾಡಲಾಗಿದೆ ಎಂದು ಆರ್ಡಿಪಿಆರ್ ಇಲಾಖೆ ಅಧೀನ ಕಾರ್ಯದರ್ಶಿ ಚೇತನ್ ಎಂ. ಆದೇಶಿಸಿದ್ದಾರೆ.



