ಇಷ್ಟಲಿಂಗ ಪೂಜೆಯಿಂದ ಅನಿಷ್ಟಗಳು ದೂರ

0
rambhapuri
Spread the love

ವಿಜಯಸಾಕ್ಷಿ ಸುದ್ದಿ, ಹರಿಹರ : ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನ ಬಿಟ್ಟು ಶಕ್ತಿ, ಶಕ್ತಿಯನ್ನು ಬಿಟ್ಟು ಶಿವನಿಲ್ಲ. ಇಷ್ಟಲಿಂಗಾರ್ಚನೆಯಿಂದ ಅನಿಷ್ಟಗಳು ದೂರವಾಗಿ ಇಷ್ಟಾರ್ಥಗಳು ಪ್ರಾಪ್ತವಾಗುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ತಾಲೂಕಿನ ಮಲೇಬೆನ್ನೂರು ಶ್ರೀ ಬೀರಲಿಂಗೇಶ್ವರ ದೇವಾಲಯ ಆವರಣದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ, ನಂತರ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜೀವಾತ್ಮ ಪರಮಾತ್ಮನ ಕಿರಣ. ಶಿವನಿಂದ ಭಿನ್ನನಾದ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಗುರಿಯಾಗಿದೆ. ಅಂಗಲಿಂಗವಾಗಲು ದೇಹ ದೇವಾಲಯವಾಗಲು, ಭವಿ ಭಕ್ತನಾಗಲು ಸಾಧನೆಯ ಮಾರ್ಗವನ್ನು ವೀರಶೈವ ಧರ್ಮದಲ್ಲಿ ಪ್ರತಿಪಾದಿಸಿದ್ದನ್ನು ಕಾಣುತ್ತೇವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಮತ್ತು ಐಕ್ಯ ಎಂಬ ಷಟ್ಸ್ಥಲಗಳ ಅನುಸಂಧಾನದಿಂದ ಜೀವಾತ್ಮ ಪರಮಾತ್ಮನಾಗಲು ಸಾಧ್ಯ ಎಂಬುದನ್ನು ಅರ್ಥಪೂರ್ಣವಾಗಿ ಬೋಧಿಸಿದ್ದಾರೆ. ಭೌತಿಕ ಜಂಜಡಗಳಿಂದ ಜೀವಾತ್ಮನ ಅಂತರಂಗ ಮತ್ತು ಬಹಿರಂಗ ಪರಿಶುದ್ಧಗೊಳಿಸುವುದೇ ಗುರುವಿನ ಧರ್ಮವಾಗಿದೆ. ಜಗ ಬೆಳಗಲು ಸೂರ್ಯ ಬೇಕು. ಅಂತರಂಗದ ಅಜ್ಞಾನ ಕಳೆಯಲು ಗುರುವೊಬ್ಬನೇ ಸಮರ್ಥನಾಗಿದ್ದಾನೆ. ಶಿವಪಥವನರಿವೊಡೆ ಗುರು ಪಥ ಮೊದಲು ಎಂಬುದನ್ನು ಅನೇಕ ಅನುಭಾವಿಗಳು ಹೇಳಿದ್ದುಂಟು ಎಂದರು.

ಶ್ರೀ ಬೀರಲಿಂಗೇಶ್ವರ ಮಂಗಲ ಮೂರ್ತಿಗೆ ಶ್ರೀಗಳು ರುದ್ರಾಭಿಷೇಕ ಪೂಜೆ ನೆರವೇರಿಸಿ, ಸಂಪ್ರೋಕ್ಷಣಾ ವಿಧಿ ಪೂರೈಸಿ ಶುಭ ಹಾರೈಸಿದರು.

ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ, ಗುರು ಶಿಷ್ಯರ ಸಾಮರಸ್ಯದ ವಿಚಾರಗಳನ್ನು ಕುರಿತು ಉಪದೇಶಾಮೃತವನ್ನಿತ್ತರು. ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಪೂಜಾರ ರೇವಣಪ್ಪ, ಅಧ್ಯಕ್ಷ ಪೂಜಾರ ನಾಗಪ್ಪ, ಧರ್ಮದರ್ಶಿಗಳಾದ ಪೂಜಾರ ಬಸಪ್ಪ, ಪೂಜಾರ ನಿಂಗಪ್ಪ, ಪೂಜಾರ ಹಾಲೇಶಪ್ಪ, ಜಿಗಳಿ ಇಂದೂಧರ, ಜಿ.ಪಂ ಮಾಜಿ ಸದಸ್ಯ ಬಿ.ಎನ್. ವಾಗೀಶಸ್ವಾಮಿ, ಬೆನಕೊಂಡಿ ಚಿದಾನಂದಪ್ಪ ಮೊದಲ್ಗೊಂಡು ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದವನ್ನು ಪಡೆದರು. ಕಾರ್ಯದರ್ಶಿ ಕೆ.ಪಿ. ಗಂಗಾಧರ ಸ್ವಾಗತಿಸಿ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಹಾಲುಮತ ಸಮಾಜ ಬಾಚಿಧವರು ಶ್ರೀ ರಂಭಾಪುರಿ ಜಗದ್ಗುರುಗಳನ್ನು ನಡೆಮುಡಿ ಮೂಲಕ ಬರಮಾಡಿಕೊಂಡರು. ಡೊಳ್ಳು ಭಜನಾ ಮಂಡಳಿಯವರು ನಡೆಮುಡಿಯಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here