ವಿಜಯಸಾಕ್ಷಿ ಸುದ್ದಿ, ಗದಗ: ನೂತನ ಸಚಿವ ಸಂಪುಟ ರಚನೆ ವೇಳೆ ಸಾಕಷ್ಟು ಗೊಂದಲಕ್ಕೆ ಕಾರಣವಾದ ಕಾಂಗ್ರೆಸ್ ಸರ್ಕಾರ ಈಗ ಅದೇ ಸಂಪುಟ ವಿಸ್ತರಣೆಯಿಂದ ಅಸಮಾಧಾನದ ಸಂಕಟ ಎದುರಿಸುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು, ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಹಲವು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರ್ಕಾರದೊಳಗಿನ ಭಿನ್ನಮತವನ್ನು ಬಯಲಿಗೆಳೆದಿದೆ ಎಂದು ಹೇಳಿದರು.
ಸಚಿವ ಸ್ಥಾನ ಹಂಚಿಕೆಯಲ್ಲಿ ಕಾಂಗ್ರೆಸ್ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳತ್ತ ಗಮನ ಹರಿಸುವ ಬದಲು ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಒಳಜಗಳದಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಸಚಿವ ಸ್ಥಾನ ಸಿಗಲಿಲ್ಲವೆಂದು ತಮ್ಮದೇ ಶಾಸಕರು ರಾಜೀನಾಮೆ ನೀಡುತ್ತಿರುವ ಬಗ್ಗೆ ಏನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟ ವಿಸ್ತರಣೆ ಅನೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅದರ ರಾಜಕೀಯ ಪರಿಣಾಮ ಎದುರಾಗಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಜನಪರ ಆಡಳಿತ ಎಂಬುದು ಕೇವಲ ಮರೀಚಿಕೆಯಾಗಿದ್ದು, ಸಚಿವ ಸಂಪುಟ ವಿಸ್ತರಣೆಯು ಸರ್ಕಾರಕ್ಕೆ ಬಲ ನೀಡುವ ಬದಲು ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.



