ಚಿಕ್ಕಬಳ್ಳಾಪುರ:- ರಾಮನಗರವನ್ನು ಇತ್ತೀಚೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದೆ. ಇದಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಬದಲಾವಣೆ ಮಾಡಿತ್ತು. ಇದರ ಬಳಿಕ ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ಕೆಲವರು ಒತ್ತಾಯಿಸಿದ್ದರು. ಆದರೆ, ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾಯಿಸುವ ಸಂಬಂಧ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.
1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಗಿತ್ತು. ಈ ವೇಳೆ ರಾಮನಗರ ಜಿಲ್ಲೆಯ ತಾಲೂಕುಗಳು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಾಮನಗರ ಜಿಲ್ಲೆ ರಚಿಸಲಾಗಿತ್ತು. ಇದೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.