ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಭೀಕರ ಕಾರು ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನೂ ಭೀಕರ ಸ್ಫೋಟ ಪ್ರಕರಣ ಸಂಬಂಧ ದೆಹಲಿ ಪೊಲೀಸರು, ಯುಎಪಿಎ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಸ್ಫೋಟದ ಬಗ್ಗೆ ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಕಾರಿನ ಮಾಲೀಕನನ್ನು ಬಂಧಿಸಿದ್ದಾರೆ. ಸ್ಫೋಟಕ್ಕೂ ಕೆಲ ಗಂಟೆಗಳಿಗೆ ಮೊದಲು ಶಂಕಿತ ಕಾರಿನ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸಂಜೆ ವೇಳೆ ಸಂಭವಿಸಿದ ಈ ಘಟನೆಯಿಂದ ದೆಹಲಿಯಾದ್ಯಂತ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಭಯೋತ್ಪಾದಕ ಕೃತ್ಯವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಪಾರ್ಕ್ ಮಾಡಲಾಗಿದ್ದ ಕಾರು ಸ್ಫೋಟಗೊಂಡಿದೆ. ಪಕ್ಕದಲ್ಲಿದ್ದ ಮತ್ತೊಂದು ಕಾರಿಗೂ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ. ಜ್ವಾನಂತರ ಹಲವಾರು ವಾಹನಗಳು ಹೊತ್ತಿ ಉರಿದಿವೆ.


