ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಜುಲೈ 11ರಂದು ನಡೆದ ದ್ವಿತೀಯ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 366 ಪ್ರಕರಣಗಳನ್ನು ₹16.62 ಕೋಟಿ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಮೂರ್ತಿಗಳಾದ ಸಚಿನ್ ಶಂಕರ ಮಗದುಮ್, ಸಿ.ಎಂ. ಪೂನಚ್ಚ ಹಾಗೂ ಗೀತಾ ಕೆ.ಬಿ. ಸೇರಿದಂತೆ ಸದಸ್ಯರು ನಾಲ್ಕು ಪೀಠಗಳಲ್ಲಿ ವಿಚಾರಣೆ ನಡೆಸಿದರು. ಒಟ್ಟು 1,037 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.
ಅಪಘಾತ ಪರಿಹಾರ, ಭೂಸ್ವಾಧೀನ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸೇವಾ ಪ್ರಕರಣಗಳು, ರಿಟ್ ಅರ್ಜಿಗಳು ಹಾಗೂ ಆಸ್ತಿ ವಿವಾದಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನಕ್ಕೆ ಸಂಬಂಧಿಸಿದ 46 ಮೇಲ್ಮನವಿಗಳನ್ನು ಸರ್ಕಾರ ನಿಗದಿಪಡಿಸಿದ್ದ ಒಂದು ಎಕರೆ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ಆಧಾರದ ಮೇಲೆ ಭೂಮಾಲೀಕರು ಮತ್ತು ಭೂಸ್ವಾಧೀನ ಅಧಿಕಾರಿಗಳ ನಡುವಿನ ಸಮಾಲೋಚನೆಯ ಮೂಲಕ ಇತ್ಯರ್ಥಪಡಿಸಲಾಯಿತು.
ಕೌಟುಂಬಿಕ ಹಾಗೂ ಆಸ್ತಿ ವಿವಾದಗಳಲ್ಲೂ ಉಭಯ ಪಕ್ಷಗಳ ನಡುವೆ ಸೌಹಾರ್ದಯುತ ರಾಜಿ ಸಂಧಾನಕ್ಕೆ ಅವಕಾಶ ಕಲ್ಪಿಸಿ, ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೇ ಬಗೆಹರಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಯಿತು ಎಂದು ಧಾರವಾಡ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಅಧಿಕ ವಿಲೇಖನಾಧಿಕಾರಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



