ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (CMIAP) ಅಡಿಯಲ್ಲಿ ₹20 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು. ಇದೇ ವೇಳೆ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅನುದಾನದಲ್ಲಿ ಮಂಜೂರಾಗಿರುವ ಎರಡು ಬಸ್ ಶೆಲ್ಟರ್ಗಳ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಯಿತು.
ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಿಥುನ ಪಾಟೀಲ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಅವರು ಎರಡು ಬಸ್ ಶೆಲ್ಟರ್ಗಳನ್ನು ಮಂಜೂರು ಮಾಡಿಸಿದ್ದು, ಇದೀಗ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದರು.
2023ರಲ್ಲಿ ಶಾಸಕರಾದ ಬಳಿಕ ಜಿ.ಎಸ್. ಪಾಟೀಲ ಅವರು ರಸ್ತೆ, ಚರಂಡಿ, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಅಬ್ಬಿಗೇರಿ ಗ್ರಾಮದಲ್ಲಿಯೂ ಈಗಾಗಲೇ ಹಲವು ಸಿಸಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ ₹80 ಲಕ್ಷ ವೆಚ್ಚದ ಮತ್ತೊಂದು ಸಿಸಿ ರಸ್ತೆ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಭರವಸೆ ನೀಡಿದರು.
ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ನಿರ್ಮಾಣಗೊಳ್ಳುತ್ತಿರುವ ಎರಡು ಬಸ್ ಶೆಲ್ಟರ್ಗಳ ಕಾಮಗಾರಿ ಸುಮಾರು ಎರಡು ತಿಂಗಳೊಳಗೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಯಲ್ಲಾಲಿಂಗೇಶ್ವರ ಮಠದ ಬಸವರಾಜ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಪಲ್ಲೇದ, ಗುರುನಾಥ ಅವರಡ್ಡಿ, ಬಸವರಾಜ ತಳವಾರ, ಎಚ್.ಟಿ. ದ್ವಾಸಲ, ಅಂದಪ್ಪ ವೀರಾಪೂರ, ಸುರೇಶ ಬಸವರಡ್ಡೇರ, ಸಿ.ಕೆ. ಕಾಳಗಿ, ಸಕ್ರಗೌಡ ಪಾಟೀಲ, ಎಂ.ಕೆ. ಅಂಗಡಿ, ಸುರೇಶ ಶಿರೋಳ, ರಾಮನಗೌಡ ಹಲಕುರ್ಕಿ, ಮಹಾಂತೇಶ ತಳವಾರ, ಶರಣಪ್ಪಗೌಡ ಮಾದಿನೂರ, ಮಲಕಾಜಪ್ಪ ಕಲ್ಲೆಶ್ಯಾಣಿ, ಸೋಮು ಶಿರೋಳ, ಮುತ್ತಣ್ಣ ಕುಕನೂರ, ಸಿದ್ದು ಹನುಮನಾಳ, ಬಸವರಾಜ ಕಮ್ಮಾರ, ಬಾಬು ಬನ್ನಿಕೊಪ್ಪ, ಶಿವಾನಂದ ಗುಗ್ಗರಿ, ಬಸವರಾಜ ಗುಗ್ಗರಿ, ಶಶಿ ಸಂಗನಾಳ, ತಿರುಮಲಿ ಬಂಡಿವಡ್ಡರ, ರಮೇಶ ಕುಡಗುಂಟಿ, ಶಂಕರ ಐಹೋಳಿ, ಸುಭಾಷ ಕೆಂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



