ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆಯು ದೇಶದಲ್ಲಿಯೇ ಮೌಲ್ಯಯುತವಾಗಿದ್ದು, ನೆಲ-ಜಲ, ಭಾಷೆಯನ್ನು ಗೌರವಿಸಿ ಸಂರಕ್ಷಿಸುವ ಕಾರ್ಯವನ್ನು ಮಾಡಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಮರಿಯಪ್ಪ ವಡ್ಡರ ಹೇಳಿದರು.
ಇಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ಭಾಷಾವಾರು ಪ್ರಾಂತ್ಯಗಳಾಗಿದ್ದವು. ಗದಗ ಜಿಲ್ಲೆ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ನಂತರ ಆಯಾ ಭಾಷೆ ಮಾತನಾಡುವವರನ್ನು ಒಂದು ರಾಜ್ಯವಾಗಿ ಮಾಡಬೇಕೆಂದು ಆಲೂರು ವೆಂಕಟರಾಯರು, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಎಂ. ಶ್ರೀಕಂಠಯ್ಯ ಮುಂತಾದವರು ಸೇರಿ ಹೋರಾಟ ಮಾಡಿ 1956ರಲ್ಲಿ ಮೈಸೂರು ರಾಜ್ಯವನ್ನಾಗಿ ಮಾಡಿದರು. ಮುಂದೆ ದೇವರಾಜ ಅರಸು, ಡಾ. ರಾಜಕುಮಾರ, ಕುವೆಂಪು ಮುಂತಾದವರು ಸೇರಿ ಹೋರಾಟ ಮಾಡಿ, ಕನ್ನಡ ಭಾಷೆ ಮಾತನಾಡುವ ಮೈಸೂರು ರಾಜ್ಯವನ್ನು 1973ರ ನವೆಂಬರ್ 1ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದು ವಿವರಿಸಿದರು.
ಶಿಕ್ಷಕ ಎಸ್.ಕೆ. ವನಹಳ್ಳಿ, ಪ್ರಧಾನ ಗುರುಮಾತೆ ಎಸ್.ಜಿ. ಕಂಠಿ ಕನ್ನಡ ನಾಡಿನ ಇತಿಹಾಸದ ಕುರಿತು ಮಾತನಾಡಿದರು. ಎಸ್.ಡಿ.ಎಂ.ಸಿ ಸದಸ್ಯರಾದ ಶಿವಪ್ಪ ಕುಂಬಾರ, ಹನುಮಂತಪ್ಪ ಕಟಿಗ್ಗಾರ, ವಿರೂಪಾಕ್ಷಪ್ಪ ಕಮತರ, ಸುಶೀಲಾ ಉಮಚಗಿ, ಗುಲಿಗೆಮ್ಮ ಮಳಗಿ ಉಪಸ್ಥಿತರಿದ್ದರು. ಎಸ್.ಬಿ. ಪಾಟೀಲ ಸ್ವಾಗತಿಸಿದರು. ಜೆ.ಆರ್. ಕುಲಕರ್ಣಿ ನಿರೂಪಿಸಿದರು. ಎಸ್.ಕೆ. ಬಳಿಗಾರ ವಂದಿಸಿದರು.


