ಗ್ರಾಮೀಣ ಪ್ರದೇಶದ ಒಂದು ಕೋಟಿ ಆಸ್ತಿಗಳು ಇ-ಸ್ವತ್ತು ತೆಕ್ಕೆಗೆ: ಪ್ರಿಯಾಂಕ ಖರ್ಗೆ

0
Spread the love

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸುಮಾರು ಒಂದು ಕೋಟಿ ಆಸ್ತಿಗಳನ್ನು ಇ-ಸ್ವತ್ತು ಯೋಜನೆಯಡಿ ತೆಕ್ಕೆಗೆ ತರುವ ಮೂಲಕ ಮನೆ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಕೈಗೊಂಡಿದೆ.

Advertisement

ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು. ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಇ-ಸ್ವತ್ತು ಯೋಜನೆ ಹಾಗೂ ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೊಸ ನಿಯಮಾವಳಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳಿಗೆ ಮನನ ಮಾಡಿಸಲು ಜಿಲ್ಲಾ ಮಟ್ಟದ ವಿಶೇಷ ತರಬೇತಿ ಆಯೋಜನೆ ಮಾಡಲು ಹೇಳಿದರು.

ರಾಜ್ಯದ ಲಕ್ಷಾಂತರ ಮಂದಿ ಈ ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ ಎಂದು ತಿಳಿಸಿದ ಖರ್ಗೆ, ಸಾರ್ವಜನಿಕರಿಗೆ ಪಾರದರ್ಶಕವಾಗಿ ಸೇವೆ ಒದಗಿಸಲು ಸಿಬ್ಬಂದಿ ಸಜ್ಜಾಗಬೇಕು ಎಂದು ಸೂಚಿಸಿದರು. ಅಲ್ಲದೆ, ಲೀಫ್ (ಸ್ಥಳೀಯ ಆರ್ಥಿಕ ವೇಗವರ್ಧಕ) ಕಾರ್ಯಕ್ರಮದಡಿ ಗ್ರಾಮ ಪಂಚಾಯತಿಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಲಭ್ಯವಿರುವ ಆಸ್ತಿಗಳನ್ನು ಗುರುತಿಸಿ, ಶಾಶ್ವತ ಆದಾಯ ತರಬಲ್ಲ ಕಟ್ಟಡಗಳ ನಿರ್ಮಾಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರವಾಸಿ ತಾಣಗಳು ಹಾಗೂ ಯಾತ್ರಾಸ್ಥಳಗಳ ಬಳಿ ಪಂಚಾಯತಿ ಆಸ್ತಿಗಳ ಬಳಕೆಯಿಂದ ಸಂಪನ್ಮೂಲ ವೃದ್ಧಿ ಯೋಜನೆಗಳನ್ನು ರೂಪಿಸಿದರೆ ಸರ್ಕಾರದಿಂದ ಅನುದಾನ ದೊರೆಯುತ್ತದೆ ಎಂದು ಸಚಿವರು ತಿಳಿಸಿದರು.


Spread the love

LEAVE A REPLY

Please enter your comment!
Please enter your name here