HomePolitics Newsರಾಜಣ್ಣ, ಪರಮೇಶ್ವರ್ ಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ಮಹತ್ವದ ನಿರ್ಧಾರ!

ರಾಜಣ್ಣ, ಪರಮೇಶ್ವರ್ ಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ಮಹತ್ವದ ನಿರ್ಧಾರ!

For Dai;y Updates Join Our whatsapp Group

Spread the love

ತುಮಕೂರು: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಜೂನ್ 3ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದಿರಲು ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣ ಅವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರೂ ನಾಯಕರು ವಿಶ್ವವಿದ್ಯಾಲಯಕ್ಕೆ ನೀಡಿರುವ ಕೊಡುಗೆ ಮಹತ್ವದ್ದು. ಆರಂಭದಲ್ಲಿ ಅವರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಆದರೆ ಪರಿಶೀಲನಾ ಸಮಿತಿ ದೇಶದ ಇತರ ರಾಜ್ಯಗಳಲ್ಲಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿಯಮಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಉದಾಹರಣೆಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸತೀಶ್ ಜಾರಕಿಹೊಳಿ ಅವರು ತಮಗೆ ನೀಡಲಾಗಿದ್ದ ಗೌರವ ಡಾಕ್ಟರೇಟ್ ಅನ್ನು ತಿರಸ್ಕರಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರಿಗೂ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡುವ ವಿಷಯದಲ್ಲಿ ಅವರು ಸ್ವತಃ ವಿನಮ್ರವಾಗಿ ನಿರಾಕರಿಸಿದ್ದರು ಎಂಬುದನ್ನೂ ಸಮಿತಿ ಪರಿಗಣಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇನ್ಮುಂದೆ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡಬಾರದು ಎಂಬ ತೀರ್ಮಾನಕ್ಕೆ ಸಮಿತಿ ಬಂದಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಈ ಬಾರಿ ಸ್ವಾತಂತ್ರ್ಯ ಹೋರಾಟಗಾರ ಟಿ. ಆರ್. ರೇವಣ್ಣ, ಕನ್ನಡದ ಕವಿ ಹಾಗೂ ಚಿಂತಕ ದ್ವಾರನಕುಂಟೆ ಪಾತಣ್ಣ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವಕೀಲ ಎನ್. ಆರ್. ಪ್ರದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಇನ್ನೂ ಅಂತಿಮ ಮಾಹಿತಿ ಲಭ್ಯವಾಗಿಲ್ಲ. ಘಟಿಕೋತ್ಸವಕ್ಕೂ ಮುನ್ನ ಅವರು ನೂತನವಾಗಿ ಸ್ಥಾಪಿತವಾದ ತುಮಕೂರು ಇನ್ನೋವೇಶನ್ ಇನ್ ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್ ಹಾಗೂ ಗೋ ಗ್ರೀನ್ – ಬೈಸಿಕಲ್ ಇನಿಶಿಯೇಟಿವ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಒಟ್ಟು 29 ಲಕ್ಷ ರೂ. ವೆಚ್ಚದಲ್ಲಿ ಘಟಿಕೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ ಒಬ್ಬರಿಗೆ ಡಿ.ಲಿಟ್, 59 ಪಿಎಚ್.ಡಿ ಪದವಿಗಳು, 2,058 ಸ್ನಾತಕೋತ್ತರ ಪದವಿಗಳು ಹಾಗೂ 8,781 ಸ್ನಾತಕ ಪದವಿಗಳು ಪ್ರದಾನವಾಗಲಿದೆ. ಜೊತೆಗೆ 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕುಲಪತಿ ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!