ಗದಗ: ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಮಾಡಿ ಅಶಾಂತಿ ಮೂಡಿಸುವ ಈ ಶಕ್ತಿಗಳ ದಮನಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಕಾರ್ ಯಾರದ್ದು, ಯಾರಿಗೆ ಮಾರಾಟವಾಗಿತ್ತು. ಅದರ ಹಿಂದೆ ಇರುವ ಭಯೋತ್ಪಾದಕರ ಸಂಪರ್ಕದ ಬಗ್ಗೆ ತನಿಖೆ ನಡೆದಿದೆ. ಬಾಂಬ್ ಬ್ಲಾಸ್ಟ್ ಆದ ನಾಲ್ಕೈದು ಗಂಟೆಯಲ್ಲೇ ಚುರುಕಾದ ಕೆಲಸ ನಡೆಸಿದ್ದಾರೆ.
ಅತೀ ಶೀಘ್ರದಲ್ಲೇ ಕೇವಲ ಕೆಂಪು ಕೋಟೆಯಲ್ಲಿ ಅಲ್ಲ. ಇಡೀ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಮಾಡಿ ಅಶಾಂತಿ ಮೂಡಿಸುವ ಈ ಶಕ್ತಿಗಳ ದಮನಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಕುರ್ಚಿ ಉಳಿಸಿಕೊಳ್ಳಲು ಸಿಎಂ ಹೇಳಿಕೆ
ಭಾರತವನ್ನು ಹಿಂದೂರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ರಾಷ್ಟ್ರ ಮಾಡುವುದು ಅಪ್ರಸ್ತುತ ಹೇಳಿಕೆ ಅಂತಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆ ಖುರ್ಚಿ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಬಾಂಬ್ ಸ್ಪೊಟ ಆಗಿರುವುದಕ್ಕೆ ಕೇಂದ್ರ ಗೃಹ ಇಲಾಖೆ ವೈಫಲ್ಯ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದಗೆ ಬೇರೆ ಉದ್ಯೋಗ ಏನಿದೆ. ಇಲ್ಲಿ ಕರ್ನಾಟಕದಲ್ಲಿ ಬೆಳಿಗ್ಗೆ ಎದ್ದರೆ ಎಷ್ಟೋ ಹಿಂಸಾಚಾರ ಆಗುತ್ತಿವೆ ಎಷ್ಟು ಸಲ ಕರ್ನಾಟಕ ಸರ್ಕಾರ ವೈಫಲ್ಯ ಆಗಬಾರದು ಎಂದು ಪ್ರಶ್ನಿಸಿದರು.


