ನವದೆಹಲಿ: ದೇಶದಲ್ಲಿ ಎಲ್ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆ ಹಿನ್ನೆಲೆ, ಪ್ರಮುಖ ವಲಯಗಳಿಗೆ ಆದ್ಯತೆ ನೀಡಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಈ ಸಂಬಂಧ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಾರ್ಯದರ್ಶಿ ನೀರಜ್ ಮಿತ್ತಲ್ ಪತ್ರ ಬರೆದು, ಪ್ರಮುಖ ಉದ್ಯಮಗಳು ತಮ್ಮ LPG ಅಗತ್ಯಗಳಲ್ಲಿ ಶೇ.70 ರಷ್ಟು ಪೂರೈಕೆಯನ್ನು ಪಡೆಯಲಿವೆ ಎಂದು ತಿಳಿಸಿದ್ದಾರೆ. ಮಾರ್ಚ್ 2026 ರ ಪೂರ್ವದಲ್ಲಿ ಅವುಗಳ ಗೃಹೇತರ ಬಳಕೆಯ ಆಧಾರದ ಮೇಲೆ ಈ ಹಂಚಿಕೆ ನಿರ್ಧರಿಸಲಾಗುತ್ತದೆ.
ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷ, ವಿಶೇಷವಾಗಿ ಇರಾನ್ನ ಕ್ರಮಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ವ್ಯತ್ಯಯ ಉಂಟಾಗಿರುವುದು LPG ಪೂರೈಕೆಗೆ ಹೊಡೆತ ನೀಡಿದೆ. ಭಾರತಕ್ಕೆ ಬರುವ LPG ಆಮದುಗಳಲ್ಲಿ ಬಹುಪಾಲು ಈ ಪ್ರದೇಶದಿಂದಲೇ ಆಗುತ್ತಿರುವುದರಿಂದ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ.
ಈ ಕ್ರಮದಿಂದ ಔಷಧ, ಆಹಾರ, ಕೃಷಿ ಹಾಗೂ ಪಾಲಿಮರ್ ಕ್ಷೇತ್ರಗಳಿಗೆ ಹೆಚ್ಚಿನ LPG ಪೂರೈಕೆ ಸಿಗಲಿದೆ. ಜೊತೆಗೆ ಪ್ಯಾಕೇಜಿಂಗ್, ಪೇಂಟ್, ಸ್ಟೀಲ್, ಸೆರಾಮಿಕ್, ಗ್ಲಾಸ್, ಫೌಂಡ್ರಿ, ಫೋರ್ಜಿಂಗ್, ಏರೋಸಾಲ್ ಸೇರಿದಂತೆ ಹಲವು ಕೈಗಾರಿಕಾ ಘಟಕಗಳಿಗೂ ಇದರ ಲಾಭವಾಗಲಿದೆ.
ಎಲ್ಪಿಜಿ ಹಂಚಿಕೆ ದಿನಕ್ಕೆ ಒಟ್ಟು 0.2 ಟಿಎಂಟಿ ಮಿತಿಯೊಳಗೆ ಇರಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ನೈಸರ್ಗಿಕ ಅನಿಲದಿಂದ ಬದಲಾಯಿಸಲಾಗದ ವಿಶೇಷ ಉದ್ದೇಶಗಳಿಗೆ LPG ಅಗತ್ಯವಿರುವ ಘಟಕಗಳಿಗೆ ಹೆಚ್ಚುವರಿ ಆದ್ಯತೆ ನೀಡಲಾಗುತ್ತದೆ.
ಈ ಕ್ರಮವು ತುರ್ತು ಪರಿಸ್ಥಿತಿಯಲ್ಲಿ ಪ್ರಮುಖ ಕೈಗಾರಿಕೆಗಳ ಕಾರ್ಯಾಚರಣೆಯನ್ನು ನಿರಂತರವಾಗಿರಿಸಲು ಸಹಾಯಕವಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.



