ವಿಜಯಸಾಕ್ಷಿ ಸುದ್ದಿ, ರೋಣ : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದ್ದು, ಸರಕಾರ ಕೂಡ ಪತನವಾಗಲಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಸೋಮವಾರ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಟಲ್ ಭೂಜಲ್ ಯೋಜನೆಯಡಿಯಲ್ಲಿ 70 ಲಕ್ಷ ರೂಗಳ ವೆಚ್ಚದ ಚೆಕ್ ಡ್ಯಾಂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬೆನಹಾಳ ಗ್ರಾಮದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರಕಾರ ಅನುದಾನ ನಿಡಿದ್ದು, ಈ ಅನುದಾನ ರಾಜ್ಯ ಸರಕಾರದ್ದಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ. ಮತದಾರರು ಲೋಕಸಭಾ ಚುನಾವಣೆಯಲ್ಲಿ ಆಲೋಚಿಸಿ ಮತದಾನ ಮಾಡಬೇಕು. ಹಾವೇರಿ ಹಾಗೂ ಬಾಗಲಕೋಟಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಮೇಶಗೌಡ ಪಾಟೀಲ, ಮುತ್ತಣ್ಣ ಜಂಗಣ್ಣವರ, ಸುರೇಶ ಹುಡೇದ, ಬಾಬುಗೌಡ ಪಾಟೀಲ, ಬಸವಂತಪ್ಪ ತಳವಾರ, ಅಶೋಕ ಹೆಬ್ಬಳ್ಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಸಿಎಂ, ಡಿಸಿಎಂ ಹಾಗೂ ನೀರಾವರಿ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಮೊದಲಿನ ಸಿದ್ದರಾಮಯ್ಯ ಈಗಿಲ್ಲ. ಪಶು ಆಸ್ಪತ್ರೆ ನಿರ್ಮಿಸಲು ದಾನವಾಗಿ ಕೊಟ್ಟಿರುವ ಜಮೀನನ್ನು ಈಗಿನ ರಾಜ್ಯ ಸರಕಾರ ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಬಹು ದೊಡ್ಡ ಅನ್ಯಾಯವೆಸಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.