ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋಳಿ ಮಾಂಸದ ತ್ಯಾಜ್ಯ ವಿಲೇವಾರಿ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಕಳೆದ 15 ದಿನಗಳಿಂದ ಹೊಸ ನೋಟಿಸ್ ಜಾರಿಗೊಳಿಸಿದ್ದು, ಕೋಳಿ ಮಾಂಸದ ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ ₹5 ಶುಲ್ಕ ಪಾವತಿಸುವಂತೆ ಸೂಚಿಸಿದೆ. ಈ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಚಿಕನ್ ಅಂಗಡಿ ಮಾಲೀಕರು ಸೆಪ್ಟೆಂಬರ್ 3 ಮತ್ತು 4ರಂದು ಎರಡು ದಿನ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕೋಳಿ ಮಾಂಸದ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಿರುವುದು ಸರಿಯಲ್ಲ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿಂದೆ ಕೋಳಿ ತ್ಯಾಜ್ಯವನ್ನು ಖಾಸಗಿ ಸಂಸ್ಥೆಗಳು ವ್ಯಾಪಾರಿಗಳಿಂದ ಹಣ ನೀಡಿ ಖರೀದಿಸುತ್ತಿದ್ದವು. ಬಳಿಕ ಅದನ್ನು ವಿವಿಧ ಕೈಗಾರಿಕೆಗಳಿಗೆ ರವಾನೆ ಮಾಡಲಾಗುತ್ತಿತ್ತು. ಈ ತ್ಯಾಜ್ಯವನ್ನು ಪ್ರಾಣಿಗಳ ಆಹಾರ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಈಗ ಅದೇ ತ್ಯಾಜ್ಯಕ್ಕಾಗಿ ಸರ್ಕಾರವೇ ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವುದರ ಉದ್ದೇಶವೇನು ಎಂಬ ಪ್ರಶ್ನೆಯನ್ನು ಪೌಲ್ಟ್ರಿ ಉದ್ಯಮಿಗಳು ಎತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿದ್ದು, ಇದೊಂದು ದೊಡ್ಡ ಮಾಫಿಯಾ ರೂಪ ಪಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಸರ್ಕಾರ ಕೂಡಲೇ ನೂತನ ಶುಲ್ಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಸರ್ಕಾರದ ಕ್ರಮವನ್ನು ವಿರೋಧಿಸಿ ಸೆಪ್ಟೆಂಬರ್ 3 ಮತ್ತು 4ರಂದು ನಗರದಾದ್ಯಂತ ಚಿಕನ್ ಅಂಗಡಿಗಳನ್ನು ಬಂದ್ ಮಾಡುವುದಾಗಿ ಸಂಘಟನೆ ತಿಳಿಸಿದೆ.
ಇನ್ನು ಚಿಕನ್ ಅಂಗಡಿ ಮಾಲೀಕರು ಕೂಡ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬಂದು ಕೋಳಿ ಮಾಂಸ ಮಾರಾಟದ ಮೂಲಕ ಜೀವನ ಕಟ್ಟಿಕೊಂಡಿರುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ತ್ಯಾಜ್ಯ ವಿಲೇವಾರಿ ಶುಲ್ಕದ ರೂಪದಲ್ಲಿ ಹೆಚ್ಚುವರಿಯಾಗಿ ಸುಮಾರು ₹5 ಸಾವಿರದಿಂದ ₹7 ಸಾವಿರದವರೆಗೆ ಹೊರೆಯಾಗುವ ಸಾಧ್ಯತೆಯಿದೆ. ಈಗಾಗಲೇ ವ್ಯಾಪಾರದಲ್ಲಿ ಹಲವು ಖರ್ಚುಗಳಿದ್ದು, ಈ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ. ಸರ್ಕಾರ ಬಡ ಹಾಗೂ ಸಣ್ಣ ವ್ಯಾಪಾರಿಗಳ ಪರವಾಗಿ ನಿಲ್ಲಬೇಕು ಎಂದು ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಕೋಳಿ ಮಾಂಸದ ತ್ಯಾಜ್ಯಕ್ಕೆ ಹಣ ಸಂಗ್ರಹಿಸುವ ಕ್ರಮವನ್ನು ಒಪ್ಪುವುದಿಲ್ಲ ಎಂದು ವ್ಯಾಪಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾನೂನಿನ ಮೊರೆ ಹೋಗುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕೋಳಿ ಮಾಂಸದ ತ್ಯಾಜ್ಯ ವಿಲೇವಾರಿ ಶುಲ್ಕದ ವಿಚಾರದಲ್ಲಿ ಸರ್ಕಾರ ಮತ್ತು ಪೌಲ್ಟ್ರಿ ವ್ಯಾಪಾರಿಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಸೆಪ್ಟೆಂಬರ್ 3 ಮತ್ತು 4ರಂದು ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಮಾಂಸಪ್ರಿಯರಿಗೆ ಎರಡು ದಿನ ತೊಂದರೆಯಾಗುವ ಸಾಧ್ಯತೆಯಿದೆ.



