ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸೆ. 30ರಿಂದ ರೈತರಿಗೆ ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಕಡಲೆ ಬೀಜಗಳ ವಿತರಣೆ ನಡೆಯಲಿದೆ ಎಂದು ನರೇಗಲ್ಲ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿ.ಕೆ. ಕಮ್ಮಾರ ಹೇಳಿದರು.
ನರೇಗಲ್ಲ ಗದಗ ಜಿಲ್ಲೆಯ ಅತ್ಯಂತ ದೊಡ್ಡ ಹೋಬಳಿಯಾಗಿದ್ದು, ಹಿಂಗಾರು ಬಿತ್ತನೆಗೆ ಒಟ್ಟು 26 ಸಾವಿರ ಹೆಕ್ಟೇರ್ ಭೂಮಿಯನ್ನು ಹೊಂದಿದೆ. ಈಗಾಗಲೇ ರೈತರು ಮುಂಗಾರು ಹಂಗಾಮಿನ ಹೆಸರು ಬೆಳೆಯನ್ನು ಪಡೆದುಕೊಂಡಿದ್ದು, ಈಗ ಹಿಂಗಾರು ಬಿತ್ತನೆಗೆ ಜಮೀನನನ್ನು ಹಸನುಗೊಳಿಸುವತ್ತ ಗಮನ ಹರಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹಿಂಗಾರು ಬಿತ್ತನೆ ಕೂಡ ಪ್ರಾರಂಭವಾಗಲಿದೆ ಎಂದರು.
ಸಾಮಾನ್ಯವಾಗಿ ಹಿಂಗಾರು ಹಂಗಾಮಿನಲ್ಲಿ ಈ ಭಾಗದ ರೈತರು ಕಡಲೆ, ಕುಸುಬಿ, ಜೋಳ, ಗೋಧಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಈ ಭಾಗದ ಭೂಮಿಯು ಸಮತಟ್ಟಾಗಿ ಬಿತ್ತನೆಗೆ ಬಹಳಷ್ಟು ಅನುಕೂಲವಿದೆ.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಲು ಇಚ್ಛಿಸುವ ರೈತರು ಎಫ್‌ಐ ಡಿ(ಫಾರ್ಮಲ್ ಡಿಜಿಟಲ್ ಇನ್ಫಾರ್ಮೇಷನ್)ನ್ನು ಕಡ್ಡಾಯವಾಗಿ ಮಾಡಿಸಿರಬೇಕು. ಈಗಾಗಲೇ ನರೇಗಲ್ಲ ಹೋಬಳಿಯ ಶೇ 95ರಷ್ಟು ರೈತರು ಎಫ್‌ಐಡಿಯನ್ನು ಮಾಡಿಸಿದ್ದಾರೆ ಎಂದರು.
ಕಡಲೆ ಬೀಜ 20 ಕೆ.ಜಿಯ ಒಂದು ಪಾಕೀಟಿನ ಬೆಲೆ 1970 ರೂ.ಗಳಾಗಿದ್ದು, ರಿಯಾಯಿತಿ ದರದಲ್ಲಿ ಸಾಮಾನ್ಯ ರೈತರಿಗೆ ಅದು 1470 ರೂ.ಗಳಿಗೆ ಮತ್ತು ಎಸ್.ಸಿ.-ಎಸ್.ಟಿಯವರಿಗೆ 1220 ರೂ.ಗಳಿಗೆ, ಹಿಂಗಾರಿ ಜೋಳ 3 ಕೆ.ಜಿ. ಪಾಕೀಟು ಸಾಮಾನ್ಯ ರೈತರಿಗೆ 229.50 ರೂ.ಗಳು ದರವಿದ್ದು, ಸಾಮಾನ್ಯ ರೈತರಿಗೆ 169.50 ರೂ.ಗಳಿಗೆ ಮತ್ತು ಎಸ್‌ಸಿ-ಎಸ್‌ಟಿಯವರಿಗೆ 139.50 ರೂ.ಗಳಿಗೆ, 30 ಕೆ.ಜಿ. ಒಂದು ಗೋಧಿಯ ಪಾಕೀಟಿನ ದರ 2250ರೂ. ಇದ್ದು, ಸಾಮಾನ್ಯ ರೈತರಿಗೆ 1800 ರೂ.ಗಳಿಗೆ ಮತ್ತು ಎಸ್.ಸಿ.-ಎಸ್.ಟಿಯವರಿಗೆ 1575 ರೂ.ಗಳಿಗೆ, 2 ಕೆ.ಜಿ ಸೂರ್ಯಕಾಂತಿ ಒಂದು ಪಾಕೀಟಿಗೆ 1200 ರೂ. ದರವಿದ್ದು, ಸಾಮಾನ್ಯ ರೈತರಿಗೆ 1040 ರೂ.ಗಳಿಗೆ ಮತ್ತು ಎಸ್.ಸಿ.-ಎಸ್.ಟಿಯವರಿಗೆ 960 ರೂ.ಗಳಿಗೆ, ಕುಸುಬಿ 5 ಕೆ.ಜಿ. ಪಾಕೀಟಿನ ಬೆಲೆ 400ರೂ.ಗಳಿದ್ದು, ಸಾಮಾನ್ಯ ರೈತರಿಗೆ 300ರೂ. ಗಳಿಗೆ ಮತ್ತು ಎಸ್.ಸಿ.-ಎಸ್.ಟಿಯವರಿಗೆ 250 ರೂ.ಗಳಿಗೆ ನಿಗದಿ ಮಾಡಿ ಸರಕಾರ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ನರೇಗಲ್ಲ ಭಾಗದಲ್ಲಿ ಈ ಸಾರೆ ಹಿಂಗಾರು ಮಳೆ ಚೆನ್ನಾಗಿ ಬಿದ್ದಿದೆ. ಆದರೆ ಹೋಬಳಿಯ ಬಹುತೇಕ ಕಡೆಗಳಲ್ಲಿ ಇನ್ನೂ ಚೆನ್ನಾಗಿ ಮಳೆ ಬೀಳದೆ ಇರುವುದರಿಂದ ಅಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಬಹುದು. ಬಿತ್ತನೆ ಬೀಜ ಪಡೆಯಲು ಬರುವ ರೈತರು ತಮ್ಮ ಎಫ್‌ಐಡಿ ಕಾರ್ಡ್ನ ಜೆರಾಕ್ಸ್ ಪ್ರತಿಯನ್ನಾಗಲಿ ಇಲ್ಲವೆ ಮೊಬೈಲ್‌ನಲ್ಲಿ ಅದರ ಫೋಟೋ ಕಾಪಿ ಮತ್ತು ಆಧಾರ್ ಕಾರ್ಡ್ನ್ನು ತರಬೇಕು ಎಂದು ಸಿ.ಕೆ. ಕಮ್ಮಾರ ತಿಳಿಸಿದರು.