ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾತ್ರಿ ವೇಳೆ ಮಚ್ಚು, ರಾಡ್‌ಗಳೊಂದಿಗೆ ಸಂಚರಿಸಿ ದರೋಡೆ ನಡೆಸುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಐವರ ಗ್ಯಾಂಗ್ ಆಯುಧ ಸಮೇತ ರಾತ್ರಿ ವೇಳೆ ಸಂಚರಿಸುತ್ತಿದ್ದು, ಶಬ್ದವಾಗದಂತೆ ಚಪ್ಪಲಿಯನ್ನೂ ಧರಿಸದೆ ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಪವಿತ್ರವನ ಹಾಗೂ ಟೀಚರ್ಸ್ ಕಾಲೋನಿ ಪ್ರದೇಶದಲ್ಲಿ ಈ ಗ್ಯಾಂಗ್ ನಿರಂತರವಾಗಿ ಸಂಚರಿಸುತ್ತಿದ್ದು, ಈಗಾಗಲೇ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಕಳ್ಳರ ಗ್ಯಾಂಗ್ ಆಂಧ್ರ ಪ್ರದೇಶ ಮೂಲದವರಾಗಿರಬಹುದು ಎನ್ನಲಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.



